ವಿಜಯಸಾಕ್ಷಿ ಸುದ್ದಿ, ಮೈಸೂರು
ಸದಾ ಜೆಡಿಎಸ್ ಸಭೆ, ಸಮಾರಂಭಗಳಿಗೆ ತೆರಳದೆ ಪಕ್ಷದಿಂದ ಅಂತರ ಕಾಯ್ದುಕೊಳ್ಳುತ್ತಿರುವ ಜಿ.ಟಿ.ದೇವೇಗೌಡ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಡವಾಗಿ ಜನ್ಮದ ದಿನದ ಶುಭಾಶಯ ಕೋರಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ಬುಧವಾರ ಹೆಚ್‌ಡಿಕೆ ಅವರ ಜನ್ಮ ದಿನವಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾಲು ಸಾಲು ಶುಭಾಶಯ ಕೋರುತ್ತಿದ್ದಾರೆ. ಕೆಲವರು ಭೇಟಿಯಾಗಿ, ಇನ್ನು ಕೆಲವರು ಫೋನ್ ಕರೆ, ಸಂದೇಶ, ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮ ದಿನದ ಶುಭಾಶಯ ತಿಳಿಸುತ್ತಿದ್ದಾರೆ.
ಆದರೆ, ದೇವೇಗೌಡರು ಮಾತ್ರ ತಡವಾಗಿ (ಅಂದರೆ ಮಧ್ಯಾಹ್ನ) ಟ್ವೀಟ್ ಮಾಡುವ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದು, ಕುತೂಹಲ ಕೆರಳಿಸಿದೆ.
ಮಾಜಿ ಸಿಎಂ ಹೆಚ್ಡಿಕೆ ಹಾಗೂ ಶಾಸಕ ಜಿಟಿಡಿ ನಡುವೆ ಮುನಿಸು ಉಂಟಾಗಿತ್ತು. ಇದರಿಂದ ಜಿಟಿಡಿ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡು ಮೈಸೂರಿನಲ್ಲಿ ನಡೆಯುವ ಜೆಡಿಎಸ್‌ನ ಎಲ್ಲ ಕಾರ್ಯಕ್ರಮಗಳಿಗೂ ಗೈರಾಗುತ್ತಿದ್ದರು. ಅಲ್ಲದೇ, ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಿಂದಲೂ ದೂರವೇ ಉಳಿದಿದ್ದಾರೆ. ಹಾಗಾಗಿ ಕಳೆದ ಮೂರು ದಿನಗಳ ಹಿಂದಷ್ಟೇ ಜನತಾದಳದ ನಾಯಕರು ಜಿಟಿಡಿ ಮನವೊಲಿಸಲು ಪ್ರಯತ್ನಿಸಿದ್ದರು.
ಹಾಗಾಗಿಯೇ ಸಹಜವಾಗಿ ಕುಮಾರಸ್ವಾಮಿ ಅವರ ಮೇಲಿದ್ದ ದೇವೇಗೌಡರ ಮುನಿಸು ಶಮನವಾಯ್ತಾ? ಜೆಡಿಎಸ್ ನಾಯಕರ ಭೇಟಿ ಫಲಪ್ರದವಾಗಿ ಗ್ರಾ.ಪಂ.ಚುನಾವಣೆಯಲ್ಲಿ ಜಿಟಿಡಿ ಸಕ್ರಿಯವಾಗಿ ಪಾಳ್ಗೊಳ್ಳುತ್ತಾರೆಯೇ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.