ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಸಿಎಂ ಬಿ.ಎಸ್. ಯಡಿಯೂರಪ್ಪ ದಿಢೀರ್ ದೆಹಲಿಗೆ ಹೊರಡಲು ಮುಂದಾಗಿದ್ದಾರೆ. ಕಳೆದ ಒಂದು ವರ್ಷದಿಂದ ಮುಖ ಮಾಡದಿದ್ದ ಬಿಎಸ್ ವೈ ಏಕಾಏಕಿ ಇಂದು ದೆಹಲಿಗೆ ಹೊರಟು ನಿಂತಿರುವುದು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ದೆಹಲಿಗೆ ಪ್ರಯಾಣಿಸಲಿರುವ ಬಿಎಸ್ ವೈ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಾಗಿ ರಾಷ್ಟ್ರೀಯ ನಾಯಕರ ಜತೆ ಚರ್ಚಿಸಲು ದೆಹಲಿ ಯಾತ್ರೆಗೆ ಮುಂದಾಗಿದ್ದಾರೆ ಎಂದು ಅವರ ಆಪ್ತರು ಹೇಳುತ್ತಿದ್ದಾರೆ. ಇದೆ ವೇಳೆ ರೆಬೆಲ್ ಶಾಸಕರ ವಿರುದ್ದ ಕ್ರಮಕ್ಕೆ ಸಿಎಂ ಒತ್ತಾಯಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಿಎಂ ಬದಲಾವಣೆ ವಿಚಾರ ಚರ್ಚೆಯಲ್ಲಿ ಇರುವಾಗಲೇ ಯಡಿಯೂರಪ್ಪ ದೆಹಲಿಗೆ ತೆರಳುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೆಲವರ ಪ್ರಕಾರ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ವರಿಷ್ಠರ ಸಲಹೆ ಪಡೆಯಲಿದ್ದು, ಜತೆಗೆ ತಮ್ಮ ಸರ್ಕಾರದ ವಿರುದ್ದ ಹೇಳಿಕೆ ನೀಡುತ್ತಿರುವ ರೆಬೆಲ್ ಶಾಸಕರ ವಿರುದ್ದ ಶಿಸ್ತು ಕ್ರಮಕ್ಕೆ ಆಗ್ರಹಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ವಿರೋಧಿ ಪಾಳೆಯದ ಪ್ರಕಾರ ಮುಖ್ಯಮಂತ್ರಿಯ ದೆಹಲಿ ಭೇಟಿ ನಿರ್ಣಾಯಕವಾಗಿದೆ.
ರಾಜ್ಯದಲ್ಲಿ ಕೊರೊನಾ ಸಂಕಟ ದೂರಾಗಿದ್ದು, ನಾಯಕತ್ವ ಬದಲಾವಣೆ ವಿಚಾರವಾಗಿ ಸ್ಪಷ್ಟ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಸಿಎಂ ಬಿಎಸ್ ವೈ ಆಪ್ತ ಶಾಸಕರ ನಿಯೋಗವನ್ನು ದೆಹಲಿಗೆ ಹೋಗಲು ಸಿದ್ಧತೆ ನಡೆಸಿದ್ದು, ಸರ್ಕಾರ ವಿರೋಧಿ ಹೇಳಿಕೆ ನೀಡುತ್ತಿರುವ ಸಿ.ಪಿ.ಯೋಗೀಶ್ವರ್, ಯತ್ನಾಳ ಹಾಗೂ ವಿಶ್ವನಾಥ ಅವರ ವಿರುದ್ದ ಕ್ರಮಕ್ಕೆ ಒತ್ತಾಯಿಸಲಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ಹಲವು ಊಹಾಪೋಹಗಳಿಗೆ ಕಾರಣವಾಗಿದ್ದು, ಅವರು ವಾಪಸ್ ಬಂದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.