-ಜಮೀನು ನೋಂದಣಿಗೆ ಲಂಚ ಕೇಳಿದ್ದ ಎಸ್.ಎಸ್. ಪಾಟೀಲ,
ಜಾಮೀನು ಸಿಗದ ಹಿನ್ನೆಲೆಯಲ್ಲಿ ಶರಣಾಗತಿ!
ವಿಜಯಸಾಕ್ಷಿ ಸುದ್ದಿ, ಗದಗ
ಖರೀದಿಸಿದ್ದ ಜಮೀನು ನೋಂದಣಿ ಮಾಡಲು ಲಂಚ ಕೇಳಿದ ಆರೋಪದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದ ಗದಗನ ರೆವಿನ್ಯೂ ಇನ್‌ಸ್ಪೆಕ್ಟರ್ ಸುರೇಶ್ ಗೌಡ ಶೇಖರಗೌಡ್ ಪಾಟೀಲ ಗುರುವಾರ ಕೊನೆಗೂ ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ.
ಗದಗ ತಾಲೂಕಿನ ಅಂತೂರ- ಬೆಂತೂರ ಗ್ರಾಮದ ಗುರಯ್ಯ ಲಗ್ಮಯ್ಯನವರ ಎಂಬುವವರು ಜಮೀನು ಖರೀದಿ ಮಾಡಿದ್ದರು. ಆ ಜಮೀನು ಗುರಯ್ಯ ಲಗ್ಮಯ್ಯನವರ ಹೆಸರಲ್ಲಿ ನೋಂದಣಿ ಮಾಡಲು ಆರ್‌ಐ ಎಸ್.ಎಸ್. ಪಾಟೀಲ 8,000 ರೂ. ಲಂಚ ಕೇಳಿದ್ದರು ಎನ್ನಲಾಗಿದೆ.
ಈ ಬಗ್ಗೆ ಎಸಿಬಿ ಕಚೇರಿಗೆ ರೈತ ಗುರಯ್ಯ ದೂರು ನೀಡಿದ್ದರು. ಆ. 1ರಂದು ರೈತ ಗುರಯ್ಯ ಲಗ್ಮಯ್ಯನವರ ಹಣ ಕೊಡಲು ಬಂದಾಗ ಕಚೇರಿಯಲ್ಲಿ ಆರ್‌ಐ ಇರಲಿಲ್ಲ. ಮಧ್ಯವರ್ತಿ ದಾವಲ್ ಎಂಬಾತನ ಕೈಯಲ್ಲಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಾವಲ್‌ನನ್ನು ವಶಕ್ಕೆ ಪಡೆದಿದ್ದರು.
ಎಸಿಬಿ ಅಧಿಕಾರಿಗಳು ಕಛೇರಿ ಮೇಲೆ ದಾಳಿ ಮಾಡಿದ ಸುದ್ದಿ ಕೇಳಿ ಆರ್‌ಐ, ಎಸ್.ಎಸ್. ಪಾಟೀಲ ಕಚೇರಿಯತ್ತ ತಲೆ ಹಾಕದೆ, ಎಸಿಬಿ ಅಧಿಕಾರಿಗಳ ಕೈಗೂ ಸಿಗದೆ ಪರಾರಿಯಾಗಿದ್ದರು.
ಇದನ್ನೂ ಓದಿ ಕಂದಾಯ ಇಲಾಖೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ; ರೆವಿನ್ಯೂ ಇನ್ಸ್‌ಪೆಕ್ಟರ್ ಪಾಟೀಲ್ ಪರಾರಿ!
ಬಂಧನದಿಂದ ತಪ್ಪಿಸಿಕೊಳ್ಳಲು ಜಾಮೀನು ಪಡೆಯುವುದಕ್ಕಾಗಿ ಜಿಲ್ಲಾ ನ್ಯಾಯಲಯ, ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ತಿರಸ್ಕೃತವಾಗಿದ್ದರಿಂದ ಗುರುವಾರ ಅನಿವಾರ್ಯವಾಗಿ ಜಿಲ್ಲಾ ನ್ಯಾಯಾಲಯದ ಮುಂದೆ ಶರಣಾದರೆಂದು ಮೂಲಗಳು ತಿಳಿಸಿವೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಎಸಿಬಿ ಅಧಿಕಾರಿಗಳ ತಾತ್ಸಾರ!
ಆ. 1ರಂದೇ ಈ ಪ್ರಕರಣ ನಡೆದಿದ್ದರೂ ಆರ್‌ಐ ಎಸ್.ಎಸ್. ಪಾಟೀಲರನ್ನು ಬಂಧಿಸದ ಎಸಿಬಿ ಅಧಿಕಾರಿಗಳ ಕುರಿತು ಹಲವು ರೀತಿಯ ಮಾತುಗಳು ಕೇಳಿ ಬಂದಿವೆ. ಬಂಧನ ಮಾಡದಂತೆ ಯಾವ ರಾಜಕಾರಣಿ ಒತ್ತಡ ಹಾಕಿದ್ದರು ಎಂಬುದೂ ಚರ್ಚೆಯಾಗಿದೆ. ಮುಂದಾದರೂ ಎಸಿಬಿ ಅಧಿಕಾರಿಗಳು ಈ ರೀತಿ ತಾರತಮ್ಯ ಮಾಡದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಲಿ ಎಂಬುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.