
ಏಕ್ ಲವ್ ಯಾ ಸಿನಿಮಾ ವಿಮರ್ಶೆ (***)
-ಬಸವರಾಜ ಕರುಗಲ್.
“ಮೊದಲು ಅವಳನ್ನ ಕೊಲೆ ಮಾಡ್ತಿನಿ, ಆಮೇಲೆ ನಿನ್ನನ್ನ ಸಾಯಿಸ್ತಿನಿ”- ಇದು ಚಿತ್ರದ ನಾಯಕ ಹೇಳೋ ಮೊದಲ ಡೈಲಾಗ್…
ಅರೇ ಇದೇನಪಾ ಇದು? ಲವ್ ಸ್ಟೋರಿ ಅನ್ಕೊಂಡ್ ಬಂದರೆ ಸೈಕೋ ಒಬ್ಬನ ಸ್ಟೋರಿ ಇದ್ದಂತಿದೆಯಲ್ಲ? ಅನ್ಸುತ್ತೆ. ಬರೀ ಹದಿನೈದು ನಿಮಿಷದಲ್ಲಿ ಲವ್ ಸ್ಟೋರಿ, ಟ್ರ್ಯಾಕ್‌ಗೆ ಬರುತ್ತೆ. ಅಲ್ಲಲ್ಲಿ ಟ್ವಿಸ್ಟು, ಟರ್ನು ಬರ್ತವೆ. ಹೈಸ್ಕೂಲಿನಲ್ಲೇ ಲವ್ವಲ್ಲಿ ಬೀಳೋ ಹುಡುಗ, ಕಾಲೇಜಿಗೆ ಬಂದರೂ ಅವಳನ್ನು ಬೇಜಾನ್ “ಓಡಾಡ್ತಾ”ನೇ ಲವ್ ಮಾಡ್ತಾನೆ.
ಒಂದಿನ ಪೊರ್ಕಿಯೊಬ್ಬ ಕಾಲೇಜಿಗೆ ಬಂದು ಅವಳನ್ನ ಲವ್ ಮಾಡುವಂತೆ ಕಾಡುವಾಗ ಓಡೋಡಿ ಬರುವ ಹೀರೋ ಪೊರ್ಕಿ ಗ್ಯಾಂಗ್‌ನ್ನ ಚಿತ್ರಾನ್ನ ಮಾಡ್ತಾನೆ. ಅದೇ ಕ್ಷಣ ಹುಡುಗಿ ಎದುರು ಪ್ರೇಮ ನಿವೇದನೆಗೆ ಮುಂದಾಗುತ್ತಿದ್ದಂತೆ ಕಥೆ, ಬೇರೊಂದು ಟ್ರ್ಯಾಕ್‌ಗೆ ಹೊರಳುತ್ತದೆ.
ಬ್ರಿಲಿಯಂಟ್ ಸ್ಟೂಡೆಂಟ್ ಎಣ್ಣೆದಾಸನಾಗ್ತಾನೆ. ಆದರೂ ಅವನು ರ‌್ಯಾಂಕ್ ಸ್ಟೂಡೆಂಟೇ. ಕುಡ್ಕೊಂಡೇ ಕಾಲೇಜಿಗೆ ಬರ‌್ತಾನೆ, ಕುಡ್ಕೊಂಡೇ ದಿ ಗ್ರೇಟ್ ಲಾಯರ್ ಘಟನೆಯೊಂದನ್ನ ವಿವರಿಸಿ, ಕೇಳೋ ಪ್ರಶ್ನೆಗೆ ಉತ್ತರ ಕೊಡ್ತಾನೆ, ವೇದಿಕೆಯಲ್ಲೇ ಪ್ರಮುಖ ಅತಿಥಿ, ಅದೇ ದಿ ಗ್ರೇಟ್ ಲಾಯರ್‌ನಿಂದ ಸಿಗರೇಟ್ ಪಡೀತಾನೆ. ಮದ್ಯದ ಅಮಲಿನ ಮಧ್ಯೆ ನಾಯಕನ ಗೆಳೆಯರ ಡಬ್ಬಲ್ ಮೀನಿಂಗ್ ಡೈಲಾಗ್‌ಗಳು ಪಡ್ಡೆಗಳಿಗೆ ಮಾತ್ರ ಇಷ್ಟವಾಗಬಹುದು.
ಮಗನಿಗಾಗಿ ಜೀವವನ್ನೇ ಕೊಡುವ ಅಪ್ಪ ಮಗನ ಈ ಸ್ಥಿತಿ ಕಂಡು ಮಮ್ಮಲ ಮರಗುತ್ತಾನೆ. ಮಗ ಹಾದಿ ತಪ್ಪಿದ್ದನ್ನ ಚಿಂತಿಸಿ ಹಾಸಿಗೆ ಹಿಡಿಯುತ್ತಾನೆ. ಕಾಯಿಲೆಯ ಅಪ್ಪನ ನೋಡಿ, ನಾಯಕ ಹುಡುಗಿ ಗುಂಗಿನಿಂದ ಹೊರ ಬಂದು, ಇನ್ನೇನು ದಿ ಗ್ರೇಟ್ ಲಾಯರ್ ಬಳಿ ಜ್ಯೂನಿಯರ್ ಆಗಿ ಸೇರಿ, ಮೊದಲ ಕೇಸ್ ಕೈಗೆತ್ತಿಕೊಳ್ಳುತ್ತಿದ್ದಂತೆ ನಿರೀಕ್ಷಿಸದ ತಿರುವು..!
ಸೆಕೆಂಡ್ ಹಾಫ್‌ನಲ್ಲಿ ಸಿನಿಮಾ ಬೇರೊಂದು ಆಯಾಮಕ್ಕೆ ಹೊರಳುತ್ತದೆ. ಅಲ್ಲಿಯವರೆಗೂ ಲವ್ ಸ್ಟೋರಿ ಎನಿಸಿದ್ದ ಸಿನಿಮಾ ಸಸ್ಪೆನ್ಸ್ ಸ್ಟೋರಿಯಾಗಿ ಮಾರ್ಪಡುತ್ತದೆ. ನಾಯಕಿಯ ಅತ್ಯಾಚಾರ ನಡೆದು, ಕೊಲೆಯತ್ನವೂ ಆಗುತ್ತದೆ. ಆದರೆ ನಾಯಕಿ ಕೋಮಾ ಸ್ಥಿತಿ ತಲುಪುತ್ತಾಳೆ. ನಾಯಕಿಯ ಈ ಸ್ಥಿತಿಗೆ ಸೈಕೋ ಕುಡುಕಾನೇ ಕಾರಣ ಅಂತ ನಾಯಕಿಯ ಹೆತ್ತವರಿಂದ ದೂರು. ಇಲ್ಲಿಂದ ಕಳ್ಳ-ಪೊಲೀಸ್ ಆಟ ಶುರು.
ನಾಯಕನಿಗೆ ಶಿಕ್ಷೆಯಾಗುತ್ತಾ? ಅಥವಾ ಬಚಾವ್ ಆಗ್ತಾನಾ? ನಾಯಕಿಯ ಕೋಮಾ ಸ್ಥಿತಿಗೆ ಯಾರು? ಹೇಗೆ? ಕಾರಣ ಎಂಬುದನ್ನ ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು.
ಸಿನಿಮಾದ ಕ್ಲೈಮ್ಯಾಕ್ಸ್‌ನ ಎರಡೂವರೆ ನಿಮಿಷದಲ್ಲಿ ಅತ್ಯಾಚಾರಿಗಳಿಗೆ ಯಾವ ಶಿಕ್ಷೆಯಾಗಬೇಕು ಎಂಬ ಒಂದೊಳ್ಳೆ ಸಂದೇಶದ ಜೊತೆಗೆ ಊಹಿಸದ ಟ್ವಿಸ್ಟ್ ಸಹ ಇದೆ. ಪ್ರೇಕ್ಷಕರು ಇದನ್ನ ಮಿಸ್ ಮಾಡ್ಕೊಬಾರದು.
ನಿರ್ದೇಶಕ ಜೋಗಿ ಪ್ರೇಮ್ ತಮ್ಮ ಹಿಂದಿನ ಎಲ್ಲ ಸಿನಿಮಾಗಳಿಂದ ಹೊರ ಬಂದಿದ್ದಾರೆ. ಬದಲಾದ ಪ್ರೇಮ್, ಸೋಷಿಯಲ್ ಮೇಸೇಜ್ ಹೊತ್ತ ಕಥೆಯೊಂದಿಗೆ ಅಳಿಯ ರಾಣಾನನ್ನ ಈ ಚಿತ್ರದ ಮೂಲಕ ಹೀರೋ ಆಗಿ ಭರ್ಜರಿಯಾಗೇ ಲಾಂಚ್ ಮಾಡಿದ್ದಾರೆ. ಪ್ರೇಮ್ ಸಿನಿಮಾಗಳಲ್ಲಿ ಇರುವ ತಾಯಿ ಸೆಂಟಿಮೆಂಟ್ ಈ ಚಿತ್ರದಲ್ಲಿಲ್ಲ, ಫಾರ್ ಎ ಚೇಂಜ್ ಆ ಸೆಂಟಿಮೆಂಟ್ ತಂದೆ-ಮಗನಿಗೆ ಶಿಫ್ಟ್ ಆಗಿದೆ. ಮಹೇಂದ್ರ ಕ್ಯಾಮೆರಾ ವರ್ಕ್ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್. ಸಾಂಗ್ಸ್, ಫೈಟ್ಸು ತುಂಬಾನೇ ರಿಚ್ ಆಗಿ ಬಂದಿವೆ.
ನಾಯಕ ರಾಣಾ ನೃತ್ಯ ಹೊಡೆದಾಟದಲ್ಲಿ ಬಹಳ ಇಷ್ಟವಾಗುತ್ತಾರೆ. ಮೂರು ಶೇಡ್‌ನ ಪಾತ್ರದಲ್ಲಿ ಕಾಣಿಸಿಕೊಂಡಿರೊ ರಾಣಾ ಕಥೆಗೆ, ಪಾತ್ರಕ್ಕೆ ಸರಿ ಹೊಂದಿದ್ದಾರೆ. ಅಭಿನಯದಲ್ಲಿ ಇನ್ನೊಂದಿಷ್ಟು ಸುಧಾರಣೆ ಬೇಕಿದೆ. ನಾಯಕಿ ರೀಷ್ಮಾ ನಾಣಯ್ಯ ಮುದ್ದು ಮುದ್ದಾಗಿ ಕಾಣಿಸಿಕೊಂಡು, ಆನಂತರ ಕೋಮಾದ ಗಂಭೀರ ಪಾತ್ರದಲ್ಲೂ ಇಷ್ಟವಾಗ್ತಾರೆ. ಮತ್ತೊಬ್ಬ ನಾಯಕಿ ರಚಿತಾರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಧಮ್, ಎಣ್ಣೆ ಹೊಡೆಯೊ ಹುಡುಗಿಯಾಗಿ ಸಿನಿಮಾದ ಮೊದಲ ಹಾಡಿನಲ್ಲೇ ಲಿಪ್ ಲಾಕ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರುವಂತೆ ಮಾಡಿದ್ದಾರೆ. ಇದನ್ನ ಬಿಟ್ಟರೆ ಚಿತ್ರದಲ್ಲಿ ರಚಿತಾ ರಾಮ್ ಪಾತ್ರಕ್ಕೂ ಮಹತ್ವ ಇದೆ. ಅಫ್‌ಕೋರ್ಸ್ ಅದನ್ನ ಅವರು ಸರಿಯಾಗಿ ನಿಭಾಯಿಸಿದ್ದಾರೆ. ದಿ ಗ್ರೇಟ್ ಲಾಯರ್ ಆಗಿ ಚರಣ್‌ರಾಜ್, ಯುದ್ಧಕಾಂಡ ಸಿನಿಮಾದ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ಪಾತ್ರವನ್ನ ಹೋಲುವಂತೆ ಕಾಣುತ್ತಾರೆ. ಶಿಷ್ಯ ದೀಪಕ್ ಪೊಲೀಸ್ ಅಧಿಕಾರಿಯಾಗಿ ಚೇಸಿಂಗ್ ದೃಶ್ಯದಲ್ಲಿ ಗಮನ ಸೆಳೀತಾರೆ. ಆದರೆ ಪೊಲೀಸ್ ಧಿರೀಸನಲ್ಲೂ ಅವರು “ಕೇಸರಿ” ಶಾಲು ಹಾಕಿದ್ಯಾಕೆ ಎಂಬ ಪ್ರಶ್ನೆಗೆ ಚಿತ್ರದಲ್ಲಿ ಎಲ್ಲೂ ಉತ್ತರ ಇಲ್ಲ. ಕಾಮಿಡಿ ಕಿಲಾಡಿಗಳ ಮೂರ್ನಾಲ್ಕು ಜನ ಏಕ್ ಲವ್ ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕನ ತಂದೆಯಾಗಿ ಸುಪ್ರೀಮ್ ಹೀರೋ ಶಶಿಕುಮಾರ್ ಇಷ್ಟವಾಗ್ತಾರೆ. ಸುಚೇಂದ್ರ ಪ್ರಸಾದ್ ಸಾಮಾಜಿಕ ಪಿಡುಗೊಂದಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಾಯಕಿಯ ತಂದೆಯಾಗಿ ಕೊನೆಯಲ್ಲಿ ಗಮನ ಸೆಳೆಯುತ್ತಾರೆ. ಕಾಮಿಡಿ ಅಲ್ಲಲ್ಲಿ, ಅಷ್ಟಕ್ಕಷ್ಟೇ ಇದೆ. ಚಿತ್ರದ ನಿಜವಾದ ನಾಯಕ ಎಂದರೆ ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಹಾಡುಗಳು. ಎಲ್ಲ ಹಾಡುಗಳಿಗೂ ಗುನುಗುನಿಸುವ ಗುಣವಿದೆ.
ಒಟ್ಟಾರೆ ಸಿನಿಮಾ ಪಡ್ಡೆಗಳಿಗೆ ಇಷ್ಟವಾಗುತ್ತೆ. ಫ್ಯಾಮಿಲಿ ಆಡಿಯನ್ಸ್‌ಗೆ ಒಂಚೂರು ಕಷ್ಟವಾಗುತ್ತೆ.
=====
ಪ್ರದರ್ಶನ: ಶಾರದಾ ಚಿತ್ರಮಂದಿರ, ಕೊಪ್ಪಳ.
Rating details:
* -ಚನ್ನಾಗಿಲ್ಲ
** -ಪರವಾಗಿಲ್ಲ
*** -ಚನ್ನಾಗಿದೆ
**** -ತುಂಬಾ ಚನ್ನಾಗಿದೆ
***** -ಮಿಸ್ ಮಾಡ್ದೆ ನೋಡಿ