ಹೈದರಾಬಾದ್: ನಂದಮೂರಿ ಬಾಲಕೃಷ್ಣ ಅವರ 111ನೇ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿರುವ ಬೆನ್ನಲ್ಲೇ, ಚಿತ್ರತಂಡ ಮತ್ತೊಂದು ದೊಡ್ಡ ಅಪ್ಡೇಟ್ ನೀಡಿದೆ. ನಟ ಮಂಚು ಮನೋಜ್ ಈ ಸಿನಿಮಾದಲ್ಲಿ ಮುಖ್ಯ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಬೃಹತ್ ಆಕ್ಷನ್ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಿಸುತ್ತಿದ್ದು, ಮಂಚು ಮನೋಜ್ ಪಾತ್ರಕ್ಕೆ ವಿಶೇಷ ತೂಕ ನೀಡಲಾಗಿದೆ ಎನ್ನಲಾಗಿದೆ. ಚಿತ್ರತಂಡದ ಪ್ರಕಾರ, ಮನೋಜ್ ಪಾತ್ರ ಅತ್ಯಂತ ಕ್ರೂರ ಮತ್ತು ಪವರ್ಫುಲ್ ಆಗಿದ್ದು, ಬಾಲಯ್ಯ ಜೊತೆಗಿನ ಅವರ ಮುಖಾಮುಖಿ ಸಿನಿಮಾದ ಹೈಲೈಟ್ ಆಗಲಿದೆ.
ಜನ್ಮದಿನದಂದು ಈ ಘೋಷಣೆ ಹೊರಬಿದ್ದ ಹಿನ್ನೆಲೆ ಮಂಚು ಮನೋಜ್ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಈ ಪಾತ್ರಕ್ಕಾಗಿ ಮನೋಜ್ ದೇಹವನ್ನು ಮತ್ತಷ್ಟು ಫಿಟ್ ಮಾಡಿಕೊಳ್ಳುತ್ತಿದ್ದು, ಶೀಘ್ರದಲ್ಲೇ ಶೂಟಿಂಗ್ಗೆ ಜಾಯಿನ್ ಆಗಲಿದ್ದಾರೆ.
ಬಾಲಕೃಷ್ಣ ಮತ್ತು ಮಂಚು ಮನೋಜ್ ನಡುವೆ ಈಗಾಗಲೇ ಉತ್ತಮ ಸ್ನೇಹ ಸಂಬಂಧವಿದೆ. ‘ಊ ಕೊಡತಾರಾ ಉಲಿಕ್ಕಿ ಪಡತಾರಾ’ ಚಿತ್ರದಲ್ಲಿ ಬಾಲಯ್ಯ ವಿಶೇಷ ಪಾತ್ರದಲ್ಲಿ ನಟಿಸಿ ಮನೋಜ್ಗೆ ಬೆಂಬಲ ನೀಡಿದ್ದರು. ಇದೀಗ ಇಬ್ಬರೂ ಎದುರುಬದಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರಕ್ಕೆ ಮತ್ತಷ್ಟು ಕ್ರೇಜ್ ತಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಮಂಚು ಮನೋಜ್, ‘ಬಾಲಯ್ಯ ಅವರೊಂದಿಗೆ ನಟಿಸುವುದು ನನ್ನ ಕನಸಾಗಿತ್ತು. ಈ ಅವಕಾಶ ನನ್ನ ಜೀವನದ ಅತ್ಯಂತ ವಿಶೇಷ ಗಿಫ್ಟ್’ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನೆಗೆಟಿವ್ ಪಾತ್ರಗಳ ಮೂಲಕ ಹೊಸ ಇಮೇಜ್ ಪಡೆದುಕೊಂಡಿರುವ ಮನೋಜ್, ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದ ಖಳನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ.



