ರೋಮ್: ಪ್ರಧಾನಿ ನರೇಂದ್ರ ಮೋದಿ ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ಸಂದರ್ಭದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಪ್ರಧಾನಿ ಮೋದಿ ಮತ್ತು ಜಾರ್ಜಿಯಾ ಮೆಲೋನಿ ನಡುವಿನ ಸ್ನೇಹವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ‘ಮೆಲೋಡಿ’ ಎಂದು ಕರೆಯುತ್ತಿದ್ದು, ಇದೀಗ ಅದೇ ಹೆಸರಿನ ಚಾಕೋಲೇಟ್ ಉಡುಗೊರೆ ನೀಡುವ ಮೂಲಕ ಮೋದಿ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಈ ವೀಡಿಯೋವನ್ನು ಜಾರ್ಜಿಯಾ ಮೆಲೋನಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಉಡುಗೊರೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಸದ್ಯ ಈ ವೀಡಿಯೋ ಲಕ್ಷಾಂತರ ಮಂದಿಯ ಗಮನ ಸೆಳೆದಿದ್ದು, ಸುಮಾರು 19.6 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ.
ಪ್ರಧಾನಿ ಮೋದಿ ರೋಮ್‌ಗೆ ಆಗಮಿಸಿದ ವೇಳೆ ಜಾರ್ಜಿಯಾ ಮೆಲೋನಿ ಆತ್ಮೀಯ ಸ್ವಾಗತ ಕೋರಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೆಲೋನಿ, “ವೆಲ್ಕಮ್ ಟು ರೋಮ್, ಮೈ ಫ್ರೆಂಡ್” ಎಂದು ಬರೆದು ಮೋದಿ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ರೋಮ್‌ಗೆ ಭೇಟಿ ನೀಡಿದ ಬಳಿಕ ಪ್ರಧಾನಿ ಮೆಲೋನಿ ಜೊತೆ ಭೋಜನ ಕೂಟದಲ್ಲಿ ಭಾಗವಹಿಸಿದ್ದಾಗಿ ತಿಳಿಸಿದ್ದಾರೆ. ಬಳಿಕ ಐತಿಹಾಸಿಕ ಕೊಲೊಸಿಯಂಗೆ ಭೇಟಿ ನೀಡಿರುವುದಾಗಿ ಹೇಳಿದ ಅವರು, ವಿವಿಧ ಮಹತ್ವದ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.



