ದಾವಣಗೆರೆ: ಜಿಲ್ಲೆಯ ಹಲವು ಭಾಗಗಳಲ್ಲಿ ಸುರಿದ ಭಾರೀ ಮಳೆ ಮತ್ತು ಗಾಳಿಯಿಂದ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಪ್ಪಾಯ ಬೆಳೆ ನೆಲಕಚ್ಚಿದರೆ, ಮರ ಬಿದ್ದು ಮನೆ ಹಾಗೂ ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.
ಜಗಳೂರು ತಾಲೂಕಿನ ಸಿದ್ದಮ್ಮನಹಳ್ಳಿ ಮತ್ತು ದೊಣ್ಣೆಹಳ್ಳಿಯಲ್ಲಿ ರೈತರಾದ ತಿಪ್ಪೇಸ್ವಾಮಿ ಹಾಗೂ ಬಸಪ್ಪ ಅವರಿಗೆ ಸೇರಿದ ಎರಡು ಎಕರೆ ಪಪ್ಪಾಯ ತೋಟ ಸಂಪೂರ್ಣ ಹಾನಿಗೊಳಗಾಗಿದೆ. ಗಾಳಿ-ಮಳೆಯ ಅಬ್ಬರಕ್ಕೆ ಗಿಡಗಳು ನೆಲಕ್ಕುರುಳಿದ್ದು, ರೈತರು ಕಂಗಾಲಾಗಿದ್ದಾರೆ.
ಉದ್ದಘಟ್ಟ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಕೊಠಡಿ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಶೀಟ್‌ಗಳು ಒಡೆದು ಹೋಗಿವೆ. ಅಲ್ಲದೆ ಶಾಲೆಯ ಅಡುಗೆ ಕೊಠಡಿ ಗೋಡೆಯಲ್ಲೂ ಬಿರುಕು ಕಾಣಿಸಿಕೊಂಡಿದೆ.
ಭರಮಸಮುದ್ರದಲ್ಲಿ ಮರ ಬಿದ್ದು ಮನೆಯೊಂದು ಜಖಂಗೊಂಡಿದ್ದು, ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಆಕಳೊಂದು ಸಾವನ್ನಪ್ಪಿದೆ.
ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಜನರು ನೀರು ಹೊರಹಾಕಲು ಪರದಾಡಿದರು. ಅಕಾಲಿಕ ಮಳೆಯಿಂದ ರೈತರು ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.



