ವಿಜಯಸಾಕ್ಷಿ ಸುದ್ದಿ, ಕಲಬುರಗಿ
ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಅಲ್ಲ, ಮನೆಯೊಂದು ನೂರು ಬಾಗಿಲು ಇದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ವಿಚಾರ ಈಗ ಅಪ್ರಸ್ತುತ. ನಮ್ಮ ಪಕ್ಷ ಬಹುಮತ ಗಳಿಸಿದಾಗ ಸಿಎಲ್ ಪಿಯಲ್ಲಿರುವ ಶಾಸಕರು ಹೈಕಮಾಂಡ್ ಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಆಗ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ಸದ್ಯ ನಾವು ಜನರಿಗೆ ನೆರವಾಗುವ ಕುರಿತು ಯೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.
ನಮ್ಮಲ್ಲಿ ಅರ್ಹರು ಬಹಳ ಜನ ಇದ್ದಾರೆ. ಹೀಗಾಗಿಯೇ ಸಿಎಂ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಯುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರೂ ಇಲ್ಲ. ಹೀಗಾಗಿ ಬಿಜೆಪಿಯವರು ಮೊದಲು ಅವರ ಮನೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ.
ಶಾಸಕ ಜಮೀರ್ ತಮ್ಮ ವ್ಯೆಯಕ್ತಿಕ ಅಭಿಪ್ರಾಯ ಹೇಳಿದ್ದಾರೆ. ಆದರೆ, ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕ ಈ ತರಹ ಮಾತನಾಡುವುದಿಲ್ಲ ಎಂದು ಜಮೀರ್ ಗೆ ಟಾಂಗ್ ಕೊಟ್ಟಿದ್ದಾರೆ.
ದಲಿತ ಸಿಎಂ ವಿಚಾರ ಇಂತಹ ಸಂದರ್ಭದಲ್ಲಿ ಕೇಳಿ ಬರುತ್ತದೆ. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಅವರಿಗೆ ಸಿಎಂ ಆಗುವ ಅರ್ಹತೆ ಇರಲ್ವಾ? ಮೀಡಿಯಾದಲ್ಲಿ ಬಂದಾಗಲೆ ದಲಿತ ಸಿಎಂ ವಿಚಾರ ಚರ್ಚೆಗೆ ಬರುತ್ತದೆ. ಆದರೆ, ನಮ್ಮ ಸಮಾಜದವರು ಎಚ್ಚೆತ್ತಕೊಂಡಿಲ್ಲವೋ ಗೊತ್ತಿಲ್ಲ. ಮುಖ್ಯಮಂತ್ರಿ ವಿಚಾರ ಬಂದಾಗ ದಲಿತ ಮುಖ್ಯಮಂತ್ರಿ ಅಂತಾ ಹೆಡ್ ಲೈನ್ ಹೊಡಿತ್ತಾರೆ. ಬೇರೆ ಸಮಾಜದವರು ಆದಾಗ ಏಕೆ ಈ ರೀತಿ ಹೆಡ್ ಲೈನ್ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.