ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಸುಮಾರು ದಿನಗಳಿಂದ ಕಾಯುತ್ತಾ ಕುಳಿತಿದ್ದ ಗ್ರಾಮ ಪಂಚಾಯತಿ ಚುನಾವಣೆಗೆ ಚುನಾವಣಾ ಆಯೋಗ ಮುಹೂರ್ತ ನಿಗದಿ ಪಡಿಸುತ್ತ್ತಿದ್ದಂತೆ ಚುನಾವಣಾ ತಯಾರಿಗಳು ಭರದಿಂದ ಸಾಗಿವೆ. ಆಯೋಗವು ಎರಡು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿದೆ. ಅದರಂತೆ ಡಿ.೨೨ ಹಾಗೂ ೨೭ ರಂದು ಮತದಾನ ನಡೆಯಲಿದ್ದು, ಡಿ.೩೦ ರಂದು ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.
ಗ್ರಾ.ಪಂ.ಚುನಾವಣೆಗಳನ್ನು ಹಲವರು ಹಲವಾರು ರೀತಿ ಬಣ್ಣಿಸಿದ್ದಾರೆ. ಕೆಲವರು ಒಂದೇ ಕುಟುಂಬದಂತಿರುವ ಹಳ್ಳಿಯ ಜನರನ್ನು ಬೇರೆ ಬೇರೆಯಾಗಿಸಲು ಬರುವುದು. ಪ್ರತಿ ಗ್ರಾಮವು ತನ್ನ ಜನಪ್ರತಿನಿಧಿಗಳನ್ನು ತಾವೇ ಆಯ್ದುಕೊಂಡು ಗ್ರಾಮದ ಅಭಿವೃದ್ದಿಗೊಳಿಸಲಿಕ್ಕಾಗಿ ಜಾರಿಗೊಳಿಸಿರುವ ಯೋಜನೆಯೇ ಗ್ರಾಮ ಸ್ವರಾಜ್‌ಗೆ ಸಂಬಂದಿಸಿದ್ದಾಗಿದೆ ಎಂದು ಬಣ್ಣಿಸುತ್ತಾರೆ.ಅದೇನೇ ಇರಲಿ ಸಹಜವಾಗಿ ಅಭಿಪ್ರಾಯಗಳು ಬೆಳೆಯುತ್ತಲೇ ಹೋಗುತ್ತವೆ. ಆದರೆ, ಒಂದಂತೂ ಸತ್ಯ ಪ್ರತಿ ಗ್ರಾಮದಿಂದ ಒಬ್ಬ ನಾಯಕ ಹುಟ್ಟುತ್ತಾನೆ. ಆಯ್ಕೆಯಾದ ನಾಯಕ ಗ್ರಾಮಸ್ಥರ ನಂಬಿಕೆಗೆ ಅರ್ಹರೇ? ಗ್ರಾಮದ ಅಭಿವೃದ್ದಿ ಬಯಸುವರೆ? ಜನರ ಸಂಕಷ್ಟಗಳಿಗೆ ಸ್ಪಂದಿಸುವರೆ? ಕ್ಷೇತ್ರ ಜನರಿಗೆ ಸಕಾಲದಲ್ಲಿ ದೊರೆಯುವವರೆ? ಎಂಬ ಅಂಶಗಳ ಕುರಿತು ಯೋಚಿಸಿ ನಾಯಕನನ್ನು ನಿರ್ಧರಿಸುವ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಈಗಾಗಲೇ ಬದುಕು ಸಾಕಷ್ಟು ಅನುಭವ ನೀಡಿದೆ. ಪ್ರಕೃತಿ ವಿಕೋಪಗಳಿಂದಾದ ಹಾನಿಯಲ್ಲಿ ನಾಯಕರು ನಿಮಗಾಸರೆ ಆಗಿದ್ದಾರೆಯೇ? ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ, ದಿನ ಕಳೆದಂತೆ ದುಸ್ತರವಾಗುತ್ತಿರುವ ಜನರ ಬದುಕು ಪ್ರತಿಯೊಂದನ್ನೂ ಗಮನದಲ್ಲಿರಿಸಿಕೊಂಡು ಸೂಕ್ತವಾದ ಅಭ್ಯರ್ಥಿಗಳಿಗೆ ಮತ ನೀಡಬೇಕು. ಹಣ, ಹೆಂಡ, ಸೀರೆ, ಇನ್ನಿತರ ಆಮಿಷಗಳಿಗೆ ಬಲಿಯಾಗಿ ಅಮೂಲ್ಯವಾದ ಮತ ಮಾರಿಕೊಳ್ಳಬೇಡಿ, ಆಸೆ, ಆಮಿಷಗಳಿಗೆ ಬಲಿಯಾದರೆ ಸಮಸ್ಯೆಗಳು ಉದ್ಭವಿಸಿದಾಗ ನಾಯಕರನ್ನು ಪ್ರಶ್ನಿಸುವ ಹಕ್ಕ ಕಳೆದುಕೊಂಡಂತಾಗುತ್ತದೆ. ಗ್ರಾಮಸ್ಥರ ಅಭಿಪ್ರಾಯ, ಸಲಹೆ ಸ್ವೀಕರಿಸುವ ಯುವಕರಿಗೆ ಹೆಚ್ಚು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಹಿರಿಯರು ಯುವಕರನ್ನು ಪ್ರೋತ್ಸಾಹಿಸಬೇಕು. ಪ್ರತಿಯೊಬ್ಬರೂ ತಮ್ಮ ತಮ್ಮ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿಸಲು ಪಣತೊಡಬೇಕು. ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ, ಹಳ್ಳಿಯ ಜನರ ಬದುಕು ಹಸನಾಗಲಿ, ಪ್ರತಿಯೊಂದು ಹಳ್ಳಿ ಆದರ್ಶವಾಗಲಿ.
ಮುಂಬರುವ ಐದು ವರ್ಷದ ನಿಮ್ಮ ಯೋಜನೆಗಳೇನು.? ಹಿಂದಿನ ಬಾರಿಯ ನಿಮ್ಮ ಸಾಧನೆಗಳೇನು?