
-ಬಸವರಾಜ ಕರುಗಲ್.
ಇನ್ನೇನು ಹೀರೋ ಮಾಡಿದ ತಪ್ಪು ಸಾಬೀತಾಯಿತು ಎನ್ನುವಷ್ಟರಲ್ಲಿ ನಿರೀಕ್ಷಿಸದ ಟ್ವಿಸ್ಟ್… ಚೇರ್‌ನ ತುದಿಯಲ್ಲಿ ಪ್ರೇಕ್ಷಕ…
ಇದೇ ಲಾಜಿಕ್ ದೃಶ್ಯ-1ರಲ್ಲಿ ವರ್ಕ್ ಆಗಿತ್ತು. ಈಗ ಅದೇ ಸಿಕ್ವೇಲ್ ಮುಂದುವರಿದಿದೆ ಅದಕ್ಕೆ ದೃಶ್ಯ-2 ಸಿನಿಮಾದ ಟೈಟಲ್ ಕಾರ್ಡ್‌ನಲ್ಲಿ The resumption (ಪುನಾರಂಭ) ಅಂತ ಸಬ್ ಟೈಟಲ್ ಸಹ ಇದೆ.
ಮೊದಲ ದೃಶ್ಯದಲ್ಲಿ ಪೊಲೀಸ್ ಕ್ರೌರ್ಯ ಹೇಗಿರುತ್ತೆ ಅನ್ನೋದಕ್ಕೆ ಸ್ಯಾಂಪಲ್ ಆಗಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ದೃಶ್ಯ ಮನುಷ್ಯನಿಗೆ ಬುದ್ಧಿವಂತಿಕೆ ಹೇಗಿರುತ್ತೆ ಅನ್ನೋದಕ್ಕೆ ಕನ್ನಡಿಯಾಗಿದೆ. ಮುಂದೆ ಮೂರನೇ ದೃಶ್ಯದಲ್ಲಿ…? ಉತ್ತರ ಗೊತ್ತಿಲ್ಲ. ಆದರೆ ಮೂರನೇ ದೃಶ್ಯ ಬರಬಹುದು ಎಂಬ ಸುಳಿವು ಸಿಕ್ಕಿರೋದು ಮಾತ್ರ ಎರಡನೇ ದೃಶ್ಯದ ಕ್ಲೈಮ್ಯಾಕ್ಸ್‌ನಲ್ಲಿ ಗೊತ್ತಾಗುತ್ತೆ.
ದೃಶ್ಯ-2 ಸಿನಿಮಾ ನಿಂತಿರೋದೇ ಕ್ಲೈಮ್ಯಾಕ್ಸ್ ಅನ್ನೋ ಪಿಲ್ಲರ್ ಮೇಲೆ. ದೃಶ್ಯ-1 ಬಿಡುಗಡೆಯಾದ 7 ವರ್ಷಗಳ ನಂತರ ದೃಶ್ಯ-2 ಬಿಡುಗಡೆಯಾಗಿದೆ. ಸಿನಿಮಾ ಹಾಗೂ ಸಿನಿಮಾದ ಪಾತ್ರಗಳು ಅಪ್‌ಡೇಟ್ ಆಗಿವೆ. ಆದರೆ ಸಂಬಂಧ ಎನ್ನುವುದು ಮಾತ್ರ ಸದಾ ಹಸಿರು.. ಹಿಂದೆ, ಇಂದು ಮತ್ತು ಮುಂದೆಯೂ ಸಹ..
once again ಇದು ವ್ಯಕ್ತಿಯೊಬ್ಬ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಸಿನಿಮಾ ಆಗಿ ಮುಂದುವರಿದಿದೆ. ಹಾಗಾಗಿ ಇಡೀ ಫ್ಯಾಮಿಲಿ ಸಮೇತ ಒಟ್ಟಿಗೆ ಕುಳಿತು ಸಿನಿಮಾ ನೋಡಬಹುದು.. ಯಾಕೆಂದರೆ ಇದು ಡಾ.ರವಿಚಂದ್ರ.ವಿ ನಟಿಸಿರೊ, ಪಿ.ವಾಸು ನಿರ್ದೇಶಿಸಿರೋ ಸಿನಿಮಾ. ರವಿಚಂದ್ರನ್ ಸಿನಿಮಾ ಅಂದ್ರೆ ಫ್ಯಾಮಿಲಿ ಆಡಿಯನ್ಸ್ ಕಮ್ಮಿ ಅನ್ನೋ ಕಾರಣವೇನೊ ಎಂಬಂತೆ
ಸಿನಿಮಾಗೆ ಯು/ಎ ಪ್ರಮಾಣಪತ್ರ ಲಭಿಸಿದೆ.
ದೃಶ್ಯ-2 ಸಿನಿಮಾ ಟೈಟಲ್ ಕಾರ್ಡ್‌ನಲ್ಲಿ ವಿ.ರವಿಚಂದ್ರನ್, ಡಾ.ರವಿಚಂದ್ರ.ವಿ ಆಗಿ ಬದಲಾಗಿದ್ದಾರೆ. ಲೆಕ್ಕ ಹಾಗೂ ಚಿತ್ರದ ಚೊಕ್ಕತೆಯ ವಿಷಯಕ್ಕೆ ಸಂಬಂಧಿಸಿದಂತೆ ದೃಶ್ಯ-2ಗೆ ಯು ಸರ್ಟಿಫಿಕೆಟ್ ಸಿಗಬೇಕಿತ್ತು.
unsolved cases will continue.. ಎನ್ನುವ ಅಕ್ಷರಗಳ ಮೂಲಕ ಮುಕ್ತಾಯಗೊಳ್ಳುವ ದೃಶ್ಯ-2 ಮತ್ತೇ ಮುಂದುವರಿಯುವ ಮುನ್ಸೂಚನೆ ನೀಡಿದೆ.
ದೃಶ್ಯ-1ರ ಮುಂದುವರಿದ ಭಾಗ ಇದಾದ್ದರಿಂದ ಅಲ್ಲಿದ್ದ ಪಾತ್ರಗಳೇ ಇಲ್ಲೂ ಅದೇ ಪಾತ್ರದಲ್ಲಿ ಮುಂದುವರಿದಿವೆ, except ಸೂರ್ಯಪ್ರಕಾಶ್. ದೃಶ್ಯ-1ರಲ್ಲಿ ಪೊಲೀಸ್ ಕ್ರೌರ್ಯ ಮೆರೆದಿದ್ದ ಸೂರ್ಯಪ್ರಕಾಶ್ ಪಾತ್ರಧಾರಿ ಅಚ್ಯುತ್ ಇಲ್ಲಿಲ್ಲ. ಆದರೆ ಸೂರ್ಯಪ್ರಕಾಶ್ ಹೆಸರು ದೃಶ್ಯ-2ರಲ್ಲಿ ಆಗಾಗ ಕೇಳುತ್ತದೆ.
ಟೈಮ್, ವರ್ಷ ಕಳೆದಂತೆಲ್ಲ ಜನ ಹಿಂದಿನದ್ದನ್ನ ಮರೆತು ಹೋಗ್ತಾರೆ ಅನ್ನೋದು ಸಹಜ. ಆದರೆ ಪೊಲೀಸ್ ಇಲಾಖೆ ಹಾಗಲ್ಲ. ಜನರ ಈ ಮರೆಗುಳಿತನವೇ ಪೊಲೀಸ್ ಡಿಪಾರ್ಟ್‌ಮೆಂಟ್‌ಗೆ ಪ್ಲಸ್ ಪಾಯಿಂಟ್. ಇನ್ವೆಸ್ಟಿಗೇಷನ್ ಎಂಬುದು ರಿ-ಇನ್ವೆಸ್ಟಿಗೇಷನ್ ಆಗಿ ಸ್ಥಿತ್ಯಂತರ ಆಗೋದೇ ಆಗ. ಆವಾಗ ತಪ್ಪಿತಸ್ಥ ತಮಗರಿವಿಲ್ಲದಂತೆ ಪೊಲೀಸ್ ಜಾಲಕ್ಕೆ ಬೀಳ್ತಾನೆ ಅನ್ನೋದು ಪೊಲೀಸ್ ಟೆಕ್ನಿಕ್. ಹಾಗಾಗಿ ಪೊಲೀಸರು ಆರೋಪಿಗೆ ಗೊತ್ತಿಲ್ಲದೇ ನಿಗಾ ಇಟ್ಟಿರ್ತಾರೆ. ಇಲ್ಲೂ ಹಾಗೇನೇ. ಟ್ವಿಸ್ಟ್ ಏನಂದ್ರೆ ಚಿತ್ರದ ನಾಯಕ ಸಹ ಪೊಲೀಸರ ಮೇಲೆ ನಿಗಾ ಇಟ್ಟದ್ದು, ಅದೃಷ್ಟವನ್ನ ನಂಬಿ ರಿಸ್ಕ್ ತೆಗೆದುಕೊಳ್ಳುವ ಕುತೂಹಲಕರ ಸಂಗತಿ..
ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಮಗನನ್ನ ಕೊಂದ ರಾಜೇಂದ್ರ ಪೊನ್ನಪ್ಪನ ಕುಟುಂಬ ಏಳು ವರ್ಷಗಳಿಂದ ಆತಂಕದಲ್ಲೇ ಕಾಲ ಕಳೆಯುತ್ತಾ, ಒಂದರ್ಥದಲ್ಲಿ ತಮ್ಮಷ್ಟಕ್ಕೆ ತಾವೇ ಶಿಕ್ಷೆ ಅನುಭವಿಸುತ್ತಾ ಜೀವನದ ಹೆಜ್ಜೆ ಸವೆಸುತ್ತಿದ್ದಾಗ ಸತತ ಏಳು ವರ್ಷಗಳಿಂದ ಪೊಲೀಸರು ಬೆನ್ನು ಬಿದ್ದಿದ್ದ ಡೆಡ್‌ಬಾಡಿಯ ಅಸ್ಥಿಪಂಜರ ಪೊಲೀಸ್ ಕಟ್ಟಡದ ಕೆಳಗೆ ಇದೆ ಎಂಬುದು ಪೊಲೀಸರಿಗೆ ಗೊತ್ತಾಗುತ್ತದೆ. ಇಲ್ಲಿಂದ ಮತ್ತೇ ಪೊಲೀಸ್ ಆ್ಯಕ್ಷನ್ ಶುರು.. ಈ ಸಲ ಕೋರ್ಟ್ ಕನೆಕ್ಷನ್ ಜಾಸ್ತಿ ಇದೆ, ಮತ್ತು ಸಮಯೋಚಿತವಾಗಿದೆ.
ವಿರಾಮದ ಬಳಿಕ ಸಿನಿಮಾ ರೋಚಕತೆಯ ಘಟ್ಟ ತಲುಪುತ್ತದೆ. ಕ್ಲೈಮ್ಯಾಕ್ಸ್ ರೋಚಕತೆಯ ತುತ್ತತುದಿ ತಲುಪುತ್ತದೆ ಎಂದರೂ ತಪ್ಪಿಲ್ಲ. ಪ್ರಕರಣ ಪತ್ತೆ ಹಚ್ಚುವ ಪೊಲೀಸರು ರಾಜೇಂದ್ರ ಪೊನ್ನಪ್ಪನನ್ನ ಹೀಡಿತಾರಾ? ಆತನ ಕುಟುಂಬಕ್ಕೆ ಶಿಕ್ಷೆಯಾಗುತ್ತಾ? ಪೊಲೀಸ್ ಅಧಿಕಾರಿಣಿಯ ರಿವೇಂಜ್ ಹೇಗಿರುತ್ತೆ? ಇವೆಲ್ಲ ಗೊತ್ತಾಗಬೇಕಂದ್ರೆ ದೃಶ್ಯ-2 ಸಿನಿಮಾ ನೋಡಲೇಬೇಕು.
ಸಿನಿಮಾ ಚನ್ನಾಗಿದೆ ಅಂದ ಮಾತ್ರಕ್ಕೆ ಮೈನಸ್ ಪಾಯಿಂಟ್‌ಗಳೇ ಇಲ್ಲ ಅಂತೇನಿಲ್ಲ. ಜಿವಿಎಸ್ ಸೀತಾರಾಂ ಕ್ಯಾಮೆರಾ ವರ್ಕ್ ರಿಚ್ ಅನಿಸದಿರುವುದನ್ನ, ಹಾಡುಗಳ ಕೊರತೆಯನ್ನು ಚಿತ್ರದ ಕಥೆ ನೀಗಿಸುತ್ತದೆ.
ಡಾ.ರವಿಚಂದ್ರ. ವಿ. ಮತ್ತೊಮ್ಮೆ ಫ್ಯಾಮಿಲಿ ಮ್ಯಾನ್ ಆಗಿ ಇಷ್ಟವಾಗುತ್ತಾರೆ. ಅನಂತ್‌ನಾಗ್ ಅವರದ್ದು ಸಣ್ಣ ಪಾತ್ರವಾದರೂ ಮಹತ್ವದ, ತಣ್ಣನೆಯ ಪಾತ್ರ. ಕಿರಿಕ್ ಪಾರ್ಟಿ ಪ್ರಮೋದ್ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿದ್ದು ಅಷ್ಟಾಗಿ ಸೂಟ್ ಆಗಿಲ್ಲ. ಶಿವಾಜಿ ಪ್ರಭು, ಆಶಾ ಶರತ್ ಹಿಂದಿನ ದೃಶ್ಯದಂತೆ ಇಲ್ಲೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಶಿವರಾಂ ಹೊಟೇಲ್ ಮಾಲೀಕನಾಗಿ, ಸಾಧು ಕೋಕಿಲ ಭಿಕ್ಷುಕನಾಗಿ ಕಾಣಿಸಿಕೊಂಡು ಅಲ್ಲಲ್ಲಿ ಕಚಗುಳಿ ಇಡುತ್ತಾರೆ. ನವ್ಯಾ ನಾಯರ್, ಸ್ವರೂಪಿಣಿ, ಸೋನು ಗೌಡ, ಹೆಬ್ಬಾಳ ಕೃಷ್ಣ, ನೀತು ರೈ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ದೇಶಕ ಪಿ.ವಾಸು ಒಂದೇ ಒಂದು ದೃಶ್ಯ ವೇಸ್ಟ್ ಆಗದಂತೆ ಪ್ರತಿ ದೃಶ್ಯಕ್ಕೂ ಸಕಾರಣ ನೀಡಿದ್ದಾರೆ. ಅವೆಲ್ಲ ರಿವೀಲ್ ಆಗೋದೇ ಕ್ಲೈಮ್ಯಾಕ್ಸ್‌ನಲ್ಲಿ.. ವಾಸು ಮತ್ತೊಮ್ಮೆ ಗೆದ್ದಿದ್ದಾರೆ ಎಂದು ಹೇಳಬಹುದು. ಚಿತ್ರವನ್ನು ನಿರ್ಮಿಸಿರೊ e4 ಎಂಟರ್ಟೈನ್ಮೆಂಟ್ ಬ್ಯಾನರ್ ನಿಧಾನವಾಗಿ ಬಂಡವಾಳ ವಾಪಾಸ್ ಪಡೆಯಬಹುದು.
ಸಿನಿಮಾ ಆರಂಭದ 48 ನಿಮಿಷಗಳ ಕಾಲ ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ ಅನ್ಸುತ್ತೆ. ಆನಂತರ ದೃಶ್ಯ-2 ಫ್ಯಾಮಿಲಿ ಕಮ್ ಥ್ರಿಲ್ಲರ್ ಕತೆಯಾಗಿ ಮಾರ್ಪಾಡಾಗುತ್ತೆ. ಹ್ಯಾಪಿಯಾಗಿ ಸಂಡೇ ಕಳೆಯಲು ಯೋಜಿಸಿ, ಯೋಚಿಸಿ ಮಾಡಿದ ಸಿನಿಮಾ.
ರೇಟಿಂಗ್: ****
ರೇಟಿಂಗ್
- * – ಚನ್ನಾಗಿಲ್ಲ.
** – ಸುಮಾರಾಗಿದೆ
*** – ಚನ್ನಾಗಿದೆ
**** – ತುಂಬಾ ಚನ್ನಾಗಿದೆ
***** – ಮಿಸ್ ಮಾಡ್ದೇ ನೋಡಿ



