ಮಂಡ್ಯ: ರೈಲ್ವೆ ಗೇಟ್ ಮುಚ್ಚಿದ್ದರೂ ನಿರ್ಲಕ್ಷ್ಯದಿಂದ ಹಳಿ ದಾಟಲು ಯತ್ನಿಸಿದ ಯುವತಿಯೊಬ್ಬಳು ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚಂದಗಿರಿಕೊಪ್ಪಲು ಗ್ರಾಮದ ಬಳಿ ನಡೆದಿದೆ.

ಚಂದಗಿರಿಕೊಪ್ಪಲು ಗ್ರಾಮದ ನಿವಾಸಿ ಲಿಖಿತಾ (19) ಮೃತಪಟ್ಟ ಯುವತಿ. ರೈಲು ಬರುತ್ತಿದ್ದ ಹಿನ್ನೆಲೆಯಲ್ಲಿ ಗ್ರಾಮದ ಸಮೀಪದ ಲೆವೆಲ್ ಕ್ರಾಸಿಂಗ್ ಗೇಟ್ ಮುಚ್ಚಲಾಗಿತ್ತು. ಈ ವೇಳೆ ಲಿಖಿತಾ ರೈಲ್ವೆ ಹಳಿ ದಾಟಲು ಮುಂದಾಗಿದ್ದಾಳೆ ಎನ್ನಲಾಗಿದೆ.
ರೈಲು ಸಮೀಪಿಸುತ್ತಿದ್ದರೂ ಗಮನಿಸದೆ ಹಳಿ ದಾಟಲು ಯತ್ನಿಸಿದ ಪರಿಣಾಮ ವೇಗವಾಗಿ ಬಂದ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಲಿಖಿತಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.









