ವಿಜಯಸಾಕ್ಷಿ ಸುದ್ದಿ, ದಾವಣಗೆರೆ : ನಮ್ಮ ಭೋಗ-ಮೋಕ್ಷಗಳಿಗೆ ಧರ್ಮವೇ ಮೂಲ. ಸತ್ಯ ಮತ್ತು ಪ್ರಾಮಾಣಿಕತೆಗಿಂತ ಮಿಗಿಲಾದ ಧರ್ಮ ಇನ್ನೊಂದಿಲ್ಲ. ಮನುಷ್ಯನನ್ನು ಪರಿಪೂರ್ಣತೆಯೆಡೆಗೆ ಕರೆದೊಯ್ಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಮಂಗಲ ಭವನದಲ್ಲಿ ಜರುಗಿದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ 2ನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ ಮಾತನಾಡಿ, ಹುಟ್ಟಿದ ಮನುಷ್ಯನಿಗೆ ಮರಣ ತಪ್ಪಿದ್ದಲ್ಲ. ಹುಟ್ಟು-ಸಾವುಗಳ ಮಧ್ಯೆ ಬರುವ ಬಾಳಿನ ಪುಟಗಳನ್ನು ಸಮೃದ್ಧಗೊಳಿಸಿಕೊಳ್ಳಬೇಕಾದುದು ಅವರವರ ಜವಾಬ್ದಾರಿಯಾಗಿದೆ ಎಂದರು.
ಮಳಲಿ ಸಂಸ್ಥಾನಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತ ನೀಡಿದರು. ನೇತೃತ್ವ ವಹಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು ಮಾತನಾಡಿದರು. ಮಲೆಬೆನ್ನೂರಿನ ಕೈಗಾರಿಕೋದ್ಯಮಿ ಬಿ.ಚಿದಾನಂದಪ್ಪನವರಿಗೆ ‘ಧರ್ಮ ರತ್ನಾಕರ’ ಪ್ರಶಸ್ತಿ ಪ್ರದಾನ ಮಾಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಹರಿಹರದ ಶಾಸಕ ಬಿ.ಪಿ. ಹರೀಶ ಶ್ರೀ ವೀರಭದ್ರೇಶ್ವರ ಸಹಸ್ರನಾಮ ಕೃತಿ ಬಿಡುಗಡೆಗೊಳಿಸಿದರು. ಬಿ.ಜೆ.ಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಸುಭಾಷಿಣಿ ಮತ್ತು ಕೆ.ಎಂ. ರಾಜು, ಸುಧಾ ಮತ್ತು ಡಾ. ರವೀಂದ್ರ ಟಿ.ಎಂ., ದೇವರಾಜ್ ಶೀಲವಂತ, ನಾಗರಾಜ್, ಕೆ.ತಿಪ್ಪೇಶ್, ಹುಲಿಕಟ್ಟಿ ರಾಜೇಶ್ ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ಸ್ವೀಕರಿಸಿದರು. ಆಲೂರ ಹಿರೇಮಠದ ಸಿದ್ಧಲಿಂಗಸ್ವಾಮಿಗಳು ಉಪಸ್ಥಿತರಿದ್ದರು.
ಹರಿಹರದ ಕಾಂತರಾಜ ಕುಂಬಾರ-ವೀರೇಶ ಬಡಿಗೇರ ಇವರಿಂದ ಭಕ್ತಿಗೀತೆ ಜರುಗಿತು. ಗಿರೀಶ ದೇವರಮನೆ ಸ್ವಾಗತಿಸಿದರು. ಉಪನ್ಯಾಸಕಿ ಸೌಭಾಗ್ಯ ಹಿರೇಮಠ ನಿರೂಪಿಸಿದರು.