HomeCrime Newsಹಬ್ಬದ ದಿನವೇ ಘೋರ ದುರಂತ: ಮಾವ ಚಲಾಯಿಸುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ...

ಹಬ್ಬದ ದಿನವೇ ಘೋರ ದುರಂತ: ಮಾವ ಚಲಾಯಿಸುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ 3 ವರ್ಷದ ಬಾಲಕ ಸಾವು!

For Dai;y Updates Join Our whatsapp Group

ಮಂಡ್ಯ: ಆಯುಧ ಪೂಜೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಘೋರ ದುರಂತ ಸಂಭವಿಸಿದೆ. ಪೂಜೆ ಸಲ್ಲಿಸಿದ ಬಳಿಕ ಕಾರನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಾಹನದ ಚಕ್ರಕ್ಕೆ ಸಿಲುಕಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯರಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಯರಗನಹಳ್ಳಿ ಗ್ರಾಮದ ಸಂಪತ್ ಕುಮಾರ್ ಅವರ ಮೂರು ವರ್ಷದ ಪುತ್ರ ಕಂದನ್ ಎಸ್. ಗೌಡ ಮೃತಪಟ್ಟ ಬಾಲಕನಾಗಿದ್ದಾನೆ. ಆಯುಧ ಪೂಜೆಯ ಹಿನ್ನೆಲೆಯಲ್ಲಿ ಸಂಪತ್ ಕುಮಾರ್ ಅವರ ಮನೆಯಲ್ಲಿ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಕುಟುಂಬಸ್ಥರು ಹಬ್ಬದ ಸಂಭ್ರಮದಲ್ಲಿದ್ದ ಸಂದರ್ಭದಲ್ಲೇ ಈ ದುರ್ಘಟನೆ ಸಂಭವಿಸಿದೆ.

ಪೂಜೆ ಮುಗಿದ ಬಳಿಕ ಸಂಪತ್ ಕುಮಾರ್ ಅವರ ಬಾಮೈದ ಸಂಜಯ್ ಕಾರನ್ನು ಬೇರೆಡೆಗೆ ನಿಲ್ಲಿಸಲು ಮುಂದಾಗಿದ್ದರು. ಈ ವೇಳೆ ಮೂರು ವರ್ಷದ ಕಂದನ್ ಕಾರಿನ ಎಡಭಾಗದಿಂದ ವಾಹನ ಹತ್ತಲು ಪ್ರಯತ್ನಿಸಿದ್ದಾನೆ.

ಆದರೆ ಕಾರಿನ ಬಳಿ ಮಗು ಇರುವುದನ್ನು ಸಂಜಯ್ ಗಮನಿಸದೆ ವಾಹನ ಚಲಾಯಿಸಿದ್ದಾರೆ. ಪರಿಣಾಮ ಬಾಲಕ ಕಾರಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಆತಂಕಗೊಂಡ ಕುಟುಂಬಸ್ಥರು ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವ ಮಾರ್ಗಮಧ್ಯೆಯೇ ಬಾಲಕ ಕೊನೆಯುಸಿರೆಳೆದಿದ್ದಾನೆ.

ಕ್ಷಣಾರ್ಧದಲ್ಲಿ ನಡೆದ ಈ ದುರ್ಘಟನೆಯಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ಹಬ್ಬದ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಮಗುವಿನ ಸಾವಿನಿಂದ ಶೋಕ ಮಡುಗಟ್ಟಿದ್ದು, ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img