ಚಾಮರಾಜನಗರ: ಕಾಡಿನಲ್ಲಿರಬೇಕಿದ್ದ ಹುಲಿಗಳು ನಾಡಿಗೆ ನುಗ್ಗಿದ್ದು, ಚಾಮರಾಜನಗರ ತಾಲೂಕಿನ ನಂಜೆದೇವಪುರ ಗ್ರಾಮದ ಬಳಿ ಒಂದೇ ಸಮಯದಲ್ಲಿ ಐದು ಹುಲಿಗಳು ಕಾಣಿಸಿಕೊಂಡಿವೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹುಲಿಗಳ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ನಂಜೆದೇವಪುರ ಸೇರಿ ವೀರನಪುರ ಮತ್ತು ಉಡಿಗಾಲ ಗ್ರಾಮಗಳಲ್ಲಿ ಇಂದು ಮತ್ತು ನಾಳೆ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಕುರಿತು ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶ ಹೊರಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಹುಲಿಗಳು ಇರುವ ಸ್ಥಳದ ಲೊಕೇಷನ್ ಅನ್ನು ಟ್ರ್ಯಾಕ್ ಮಾಡಿದ್ದು, ಅವುಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಕೇವಲ ಇಬ್ಬರು ಪಶುವೈದ್ಯರು ಮಾತ್ರ ಲಭ್ಯವಿರುವುದರಿಂದ ಕಾರ್ಯಾಚರಣೆ ಕಷ್ಟಸಾಧ್ಯವಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಹುಲಿಗಳ ಸೆರೆ ಕಾರ್ಯಾಚರಣೆಯ ಹಿನ್ನೆಲೆ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕರು ಗುಂಪು ಸೇರಬಾರದು ಹಾಗೂ ಮನೆಯಿಂದ ಹೊರಬರದೇ ಸಹಕರಿಸಬೇಕು ಎಂದು ತಹಶೀಲ್ದಾರ್ ಗಿರಿಜಾ ಮನವಿ ಮಾಡಿದ್ದಾರೆ.



