ವಿಜಯಸಾಕ್ಷಿ ಸುದ್ದಿ, ಗದಗ/ಬೆಂಗಳೂರು: ರಾಜ್ಯದಲ್ಲಿ 1973ರಲ್ಲಿ ಜಾರಿಗೆ ಬಂದ ಸ್ಲಂ ಕಾಯ್ದೆಯಡಿ ಸರ್ಕಾರಿ ಹಾಗೂ ಖಾಸಗಿ ಮಾಲಿಕತ್ವದ ಸಾವಿರಾರು ಗುಡಿಸಲು ಪ್ರದೇಶಗಳನ್ನು ಅಧಿಕೃತವಾಗಿ ಸ್ಲಂಗಳೆಂದು ಘೋಷಣೆ ಮಾಡಲಾಗಿದ್ದರೂ, 53 ವರ್ಷಗಳು ಕಳೆದರೂ ಅಲ್ಲಿನ ನಿವಾಸಿಗಳಿಗೆ ಭೂಮಿಯ ಮಾಲಿಕತ್ವ ಕಲ್ಪಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿರುವ ಸ್ಲಂ ಜನಾಂದೋಲನ–ಕರ್ನಾಟಕ ರಾಜ್ಯ ಸಮಿತಿ, ಸ್ಲಂ ನಿವಾಸಿಗಳಿಗೆ ಕೂಡಲೇ ಭೂಮಿಹಕ್ಕು ಖಾತ್ರಿಗೊಳಿಸುವಂತೆ ಆಗ್ರಹಿಸಿದೆ.
ಈ ಸಂಬಂಧ ಬೆಂಗಳೂರಿನ ಗಾಂಧಿ ಭವನಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಘಟನೆಯ ಪದಾಧಿಕಾರಿಗಳು ಮನವಿ ಸಲ್ಲಿಸಿ, 1973ರ ಸ್ಲಂ ಕಾಯ್ದೆಯಡಿ ಘೋಷಣೆಯಾಗಿರುವ ಕೊಳಗೇರಿ ಪ್ರದೇಶಗಳ ನಿವಾಸಿಗಳಿಗೆ ಭೂಮಿಹಕ್ಕು ಕಲ್ಪಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಸ್ಲಂ ಕಾಯ್ದೆಯಡಿ ಇರುವ 708 ಖಾಸಗಿ ಮಾಲಿಕತ್ವದ ಸ್ಲಂ ಪ್ರದೇಶಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಈ ಪ್ರದೇಶಗಳನ್ನು ಸ್ಲಂ ಕಾಯ್ದೆಯ ಸೆಕ್ಷನ್ 17ರ ಅಡಿಯಲ್ಲಿ ವಶಪಡಿಸಿಕೊಂಡು, ಭೂಮಿಹಕ್ಕು ಕಲ್ಪಿಸುವ ಉದ್ದೇಶದಿಂದ ಕನಿಷ್ಠ ₹2 ಸಾವಿರ ಕೋಟಿ ಅನುದಾನ ಮೀಸಲಿಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತ್ತೀಚೆಗೆ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಪ್ರತಿ ಜಿಲ್ಲೆಗೆ 50 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿರುವುದನ್ನು ಸ್ವಾಗತಿಸಿದ ಸಂಘಟನೆ, ಈ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗದೆ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿ, ರಾಜ್ಯದ ಸ್ಲಂಗಳಲ್ಲಿ ವಾಸಿಸುವ ಕುಟುಂಬಗಳು ಹಾಗೂ ಲಕ್ಷಾಂತರ ನಿವೇಶನ ರಹಿತ ಕುಟುಂಬಗಳಿಗೆ ಇದರ ಪ್ರಯೋಜನ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸ್ಲಂ ಜನಾಂದೋಲನ–ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ, ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ್ ಆರ್. ಮಾನ್ವಿ, ಜನಾರ್ಧನ ಹಳ್ಳಿಬೆಂಚಿ, ಮಹಿಳಾ ಸಂಚಾಲಕಿ ಚಂದ್ರಮ್ಮ, ವಿಭಾಗೀಯ ಸಂಚಾಲಕಿ ಶೋಭಾ ಕಮತರ, ಖಜಾಂಚಿ ಮಂಜುಬಾಯಿ, ಗದಗ ಭಾಗದ ಸಂಚಾಲಕಿ ಪುಷ್ಪಾ ಬಿಜಾಪೂರ, ಬೆಳಗಾವಿ ಸಂಚಾಲಕ ಫಕ್ಕೀರಪ್ಪ ತಳವಾರ, ಧಾರವಾಡ ಸಂಚಾಲಕ ರಸೂಲ್ ನದಾಫ, ಕೊಪ್ಪಳ ಸಂಚಾಲಕಿ ನಾಗರತ್ನ ಅಳವಂಡಿ, ಗಂಗಾವತಿ ಸಂಚಾಲಕಿ ರೇಷ್ಮಾಬಾನು, ಹೊಸಪೇಟೆ ಸಂಚಾಲಕಿ ವೆಂಕಮ್ಮ, ಚಿತ್ರದುರ್ಗ ಸಂಚಾಲಕಿ ಸುಧಾ, ಕೆ. ರಾಜಣ್ಣ, ತುಮಕೂರು ಸಂಚಾಲಕ ಅರುಣ ಟಿ., ತಿರುಮಲಯ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.



