ಹಾವೇರಿ: ಕಾಡುಹಂದಿಗಳಿಂದ ಬೆಳೆ ರಕ್ಷಿಸಿಕೊಳ್ಳಲು ಜಮೀನಿನಲ್ಲಿ ಇಡಲಾಗಿದ್ದ ಎನ್ನಲಾದ ನಾಡಬಾಂಬ್ ಸೇವಿಸಿ ಎರಡು ಶ್ವಾನಗಳು ಹಾಗೂ ಒಂದು ನರಿ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದ ಸಮೀಪ ನಡೆದಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕಾಡುಹಂದಿಗಳ ಹಾವಳಿ ಹೆಚ್ಚಾಗಿದ್ದು, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗುತ್ತಿದೆ ಎನ್ನಲಾಗಿದೆ. ಇದರಿಂದ ಬೇಸತ್ತ ಕೆಲ ರೈತರು ಕಾಡುಹಂದಿಗಳನ್ನು ತಡೆಯುವ ಉದ್ದೇಶದಿಂದ ಜಮೀನಿನಲ್ಲಿ ನಾಡಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ಆದರೆ ಕಾಡುಹಂದಿಗಳ ಬದಲಿಗೆ ಎರಡು ಶ್ವಾನಗಳು ಹಾಗೂ ಒಂದು ನರಿ ಆ ಸ್ಫೋಟಕವನ್ನು ಸೇವಿಸಿದ್ದು, ಸಾವನ್ನಪ್ಪಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ನಾಡಬಾಂಬ್ ಇಟ್ಟವರು ಯಾರು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.



