ತುಮಕೂರು: ದಯಾಮರಣ ಕೋರಿದ್ದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.
ತಾಯಿ ರಾಬಿಯಾ ಪಾಷಾ (39), ಮಗಳು ತಮನ್ನಾ (9), ಮಗ ಸಿಮ್ರಾನ್ (5) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್‌ಪಿ ಅಶೋಕ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2025ರಲ್ಲಿ ತುಮಕೂರಿನಲ್ಲಿ ನಡೆದ ಸರ್ಕಾರದ ವಿವಿಧ ಸವಲತ್ತು ವಿತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಬಳಿ ರಾಬಿಯಾ ತಮ್ಮ ಮನವಿ ಆಲಿಸುವಂತೆ ಹೋರಾಟ ನಡೆಸಿದ್ದರು. ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ 20/30 ನಿವೇಶನ ಮಂಜೂರು ಮಾಡಿದ್ದರು. ಆದೇಶ ನೀಡಿ ಒಂದೂವರೆ ವರ್ಷ ಕಳೆದರೂ ನಿವೇಶನ ನೀಡದೆ ಅಧಿಕಾರಿಗಳು ವಿಳಂಬ ಮಾಡಿದ್ದರು.
ಇದರಿಂದ ರೋಸಿಹೋದ ರಾಬಿಯಾ, ಅಂದಿನ ಗೃಹಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ಪ್ರತಿಭಟಿಸಿ, ಸಿಎಂ ಆದೇಶ ಮಾಡಿದ್ದರೂ ನಿವೇಶನ ಸಿಕ್ಕಿಲ್ಲ ಎಂದು ದಯಾಮರಣ ಕೋರಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದರು. ಆಗ ಮಹಿಳೆಯನ್ನು ಕರೆಸಿ ಸಮಸ್ಯೆ ಆಲಿಸಿದ್ದ ಗೃಹಸಚಿವರು, ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ಒಂದು ನಿವೇಶನ ನೀಡಿದ್ದರು.
ಸರ್ಕಾರ ಜಾಗ ಕೊಟ್ಟು ಮನೆ ಕಟ್ಟಿಸಿಕೊಡುತ್ತಿದ್ದರೂ ಮಹಿಳೆ ಮಕ್ಕಳೊಂದಿಗೆ ಈ ಕೃತ್ಯಕ್ಕೆ ಮುಂದಾಗಲು ಕಾರಣವೇನು ಎಂಬುದು ಸದ್ಯ ಅನುಮಾನ ಹುಟ್ಟುಹಾಕಿದೆ.



