ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಇಲ್ಲಿನ ಮಂತ್ರಾಲಯ ಪಾದಯಾತ್ರಾ ಸಂಘದ ವತಿಯಿಂದ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ 66ನೇ ವರ್ಷದ ಪಾದಯಾತ್ರೆಯು ಯಾತ್ರೆಯ ರೂವಾರಿ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಿಂದ ಬುಧವಾರ ರಾಯರ ಸ್ಮರಣೆಯೊಂದಿಗೆ ಪ್ರಾರಂಭವಾಯಿತು.
ಪಾದಯಾತ್ರೆ ಆರಂಭಕ್ಕೂ ಮುನ್ನ ದಿ.ವೈದ್ಯ ಬಾಬುರಾವ್ ಕುಲಕರ್ಣಿ ಅವರ ನಿವಾಸದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಪಾದಯಾತ್ರೆಯ ಯಶಸ್ಸಿಗಾಗಿ ಪ್ರಾಣೇಶಾಚಾರ್ಯ ಅವಧಾನಿ ಅವರ ನೇತೃತ್ವದಲ್ಲಿ ಹೋಮವನ್ನು ನೆರವೇರಿಸಲಾಯಿತು.
ಪಾದಯಾತ್ರೆಯು ಸೋಮೇಶ್ವರನ ದರ್ಶನ ಪಡೆದು ಪಾಟೀಲ ಕುಲಕರ್ಣಿ ಅವರ ನಿವಾಸದಲ್ಲಿ ಸಭೆಯಾಗಿ ಮಾರ್ಪಟ್ಟಿತು. ಈ ವೇಳೆ ಸಂಘದ ಹಿರಿಯರಾದ ಕೆ.ಆರ್. ದೇಶಪಾಂಡೆ ಮಾತನಾಡಿ, ಧಾರ್ಮಿಕ ಕ್ಷೇತ್ರದ ಪಾದಯಾತ್ರೆ ಮನಸ್ಸಿನಲ್ಲಿರುವ ದುರ್ಗುಣಗಳನ್ನು ನಾಶ ಮಾಡಿ ಸದ್ಗುಣಗಳ ಪ್ರಾಪ್ತಿಗೆ ಮುಕ್ತಿ ಮಾರ್ಗ ತೋರುವುದಾಗಿದೆ. ದಿ.ವೈದ್ಯ ಬಾಬುರಾವ್ ಕುಲಕರ್ಣಿ ಮತ್ತು ದಿ.ಶ್ರೀನಿವಾಸ ಕುಲಕರ್ಣಿ ಸಂಘಟನೆ ಮತ್ತು ಅನೇಕ ಸಾತ್ವಿಕ ಶಕ್ತಿಗಳು ಈ ಪಾದಯಾತ್ರೆಗೆ ದಾರಿದೀಪವಾಗಿರಲಿವೆ. ಪಾದಯಾತ್ರೆಯಲ್ಲಿ ನಿತ್ಯವೂ ಹೋಮ-ಹವನ, ಹರಿನಾಮಸ್ಮರಣೆ ನಡೆಸಲಾಗುವದರಿಂದ ಸಮಸ್ತ ಮಾನವ ಕುಲಕ್ಕೆ ಒಳ್ಳೆಯದಾಗಬೇಕೆಂಬ ಸಂಕಲ್ಪವನ್ನು ಹೊಂದಿದ್ದೇವೆ. ಅ.೨೭ರಂದು ಪಾದಯಾತ್ರೆಯು ಶ್ರೀಕ್ಷೇತ್ರ ಮಂತ್ರಾಲಯವನ್ನು ತಲುಪಲಿದೆ ಎಂದು ನುಡಿದರು.
ಈ ವೇಳೆ ಪಲ್ಲಣ್ಣ ಕುಲಕರ್ಣಿ, ಕೃಷ್ಣ ಕುಲಕರ್ಣಿ(ತಂಗೋಡ), ಡಾ.ಶ್ರೀಹರಿ ಕುಲಕರ್ಣಿ, ಆರ್.ಎ. ಕುಲಕರ್ಣಿ, ಗೋಪಾಲ ಪಡ್ನೀಸ್, ಅನಿಲ ಕುಲಕರ್ಣಿ, ಗುರುರಾಜ ಕುಲಕರ್ಣಿ, ವಿ.ಎಲ್. ಪೂಜಾರ, ಲಕ್ಷ್ಮೀಕಾಂತ ಗಣಾಚಾರ, ಪ್ರಾಣೇಶ ಬೆಳ್ಳಟ್ಟಿ, ದಿಲೀಪ್ ಜೋಶಿ, ವೆಂಕಟೇಶ ಗುಡಿ, ರಾಜಾಚಾರ್ಯ ರಾಯಚೂರ, ಕೆ.ಎಸ್. ಕುಲಕರ್ಣಿ, ನಾರಾಯಣ ಪಾಟೀಲ ಕುಲಕರ್ಣಿ, ಗುರುರಾಜ ಪಾಟೀಲ ಕುಲಕರ್ಣಿ, ದತ್ತಾತ್ರೇಯ ಪಾಟೀಲ ಕುಲಕರ್ಣಿ, ಶ್ರೀಕಾಂತ ಪೂಜಾರ, ದಿಗಂಬರ ಪೂಜಾರ ಮುಂತಾದವರಿದ್ದರು.