ಬಳ್ಳಾರಿ: ಜಿಲ್ಲೆಯ ಸಿರಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಅಪರೂಪದ ಬಂಡೆಗಲ್ಲು ಶಾಸನವೊಂದು ಪತ್ತೆಯಾಗಿದ್ದು, ಇದು ಮೌರ್ಯರ ಆಳ್ವಿಕೆಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿದೆ.
ನಿಟ್ಟೂರು ಗ್ರಾಮದ ಸುಕ್ರದಪ್ಪನ ಬೆಟ್ಟದ ಹೊಲದಲ್ಲಿ ಈ ಬಂಡೆಗಲ್ಲು ಶಾಸನ ಪತ್ತೆಯಾಗಿದ್ದು, ಧಾರವಾಡದ ಲಿಪಿತಜ್ಞ ಮಾರುತಿ ಭಜಂತ್ರಿ ಅವರ ನೇತೃತ್ವದ ಸಂಶೋಧನಾ ತಂಡ ಇದನ್ನು ಗುರುತಿಸಿದೆ.
ಇತಿಹಾಸ ಸಂಶೋಧಕ ಗಂಗಾವತಿಯ ಶರಣಬಸಪ್ಪ ಕೋಲ್ಕಾರ್ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನ ನಡೆಸಲಾಗಿದ್ದು, ಬಂಡೆಯ ಮೇಲೆ ಪ್ರಾಚೀನ ಲಿಪಿಯಲ್ಲಿ ಏಳು ಸಾಲುಗಳ ಶಾಸನ ಕೆತ್ತಲಾಗಿದೆ.
ಪ್ರಾಥಮಿಕ ಅಧ್ಯಯನದ ಪ್ರಕಾರ, ಈ ಶಾಸನವು ಮೌರ್ಯರ ಆಳ್ವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಒಳಗೊಂಡಿದ್ದು, 7ನೇ ಶತಮಾನದ ಬಾದಾಮಿ ಚಾಲುಕ್ಯರ ಕಾಲದಿಂದ ರಾಷ್ಟ್ರಕೂಟರ ಕಾಲಘಟ್ಟದ ನಡುವಿನ ಅವಧಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಈ ಪತ್ತೆ ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದ್ದು, ದಕ್ಷಿಣ ಭಾರತದಲ್ಲಿ ಮೌರ್ಯರ ಪ್ರಭಾವ ಮತ್ತು ನಂತರದ ರಾಜವಂಶಗಳ ಆಡಳಿತದ ಕುರಿತ ಅಧ್ಯಯನಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆ ಇದೆ.
ವಿಶೇಷವೆಂದರೆ, ಇದೇ ನಿಟ್ಟೂರು ಪ್ರದೇಶದಲ್ಲಿ ಈ ಹಿಂದೆ ಅಶೋಕನ ಶಿಲಾಶಾಸನವೂ ಪತ್ತೆಯಾಗಿತ್ತು. ಈಗ ಪತ್ತೆಯಾದ ಈ ಹೊಸ ಬಂಡೆಗಲ್ಲು ಶಾಸನವು ಅಶೋಕ ಶಿಲಾಶಾಸನ ಪತ್ತೆಯಾದ ಸ್ಥಳದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವುದು ಮತ್ತಷ್ಟು ಮಹತ್ವ ಪಡೆದಿದೆ.



