HomeKarnataka Newsದುರಾಡಳಿತದಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ

ದುರಾಡಳಿತದಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ: ಹೆಚ್.ಡಿ.ಕುಮಾರಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ಕಾಂಗ್ರೆಸ್ ಪಕ್ಷದ ದುರಾಡಳಿತದಿಂದ ಬೆಂಗಳೂರಿನ ಜನರು ನಲುಗಿ ಹೋಗುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು. ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೇಂದ್ರ ಸಚಿವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ಏನನ್ನೂ ಮಾಡುತ್ತಿಲ್ಲ. ಬದಲಿಗೆ ಯೋಜನೆಗಳ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಲೂಟಿ ಹೊಡೆಯುತ್ತಿದೆ. ಮಳೆ ಬಂದರೆ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಲ್ಲುತ್ತಿದೆ. ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರದ ಬಳಿ ಹಣ ಇಲ್ಲವಂತೆ, ಆದರೆ ದೋಚುವುದಕ್ಕೆ ಯೋಜನೆಗಳ ಮೇಲೆ ಯೋಜನೆಗಳನ್ನು ರೂಪಿಸಿ ಜನರನ್ನು ವಂಚಿಸುತ್ತಿದ್ದಾರೆ ಎಂದು ಸಚಿವರು ದೂರಿದರು.

ಈ ಸರ್ಕಾರದ ಯೋಗ್ಯತೆಗೆ ಸಮರ್ಪಕವಾಗಿ ಕಸ ವಿಲೇವಾರಿ ಮಾಡುವುದಕ್ಕೆ ಆಗುತ್ತಿಲ್ಲ. ಬೀದಿ ಬೀದಿಯಲ್ಲಿ ರಾಶಿಗಟ್ಟಲೆ ಕಸ ಬಿದ್ದಿದೆ. ಕೆಟ್ಟ ಮತ್ತು ದುರಾಡಳಿತದಿಂದ ಇಡೀ ದೇಶದಲ್ಲಿ ಕರ್ನಾಟಕಕ್ಕೆ ಅತ್ಯಂತ ಕೆಟ್ಟ ಹೆಸರು ಬಂದಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಡ ಜನರಿಗೆ ಒಳ್ಳೆಯದು ಮಾಡುವ ಉದ್ದೇಶ ಈ ಸರ್ಕಾರಕ್ಕೆ ಇಲ್ಲ. ಗ್ಯಾರೆಂಟಿಗಳನ್ನು ಕೊಟ್ಟಹಾಗೆ ಕೊಟ್ಟು ಇದೀಗ ಅದರಲ್ಲಿ ಮುಕ್ಕಾಲು ಪಾಲು ಜನರನ್ನು ಕಿತ್ತು ಹಾಕುವ ಸಂಚು ನಡೆಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ ಸಾಲ ಎಂದು ₹10,000 ನೀಡುವ ಯೋಜನೆ ರೂಪಿಸಿದ್ದೆ. ನನ್ನ ಸರ್ಕಾರ ಹೋದ ಮೇಲೆ ಆ ಯೋಜನೆಯನ್ನು ಕೈ ಬಿಡಲಾಯಿತು.

ಬಡ ವ್ಯಾಪಾರಿಗಳು ಎಷ್ಟೇ ಗೋಗರಿದರೂ ಆ ಯೋಜನೆಯನ್ನು ಪುನಾ ಜಾರಿಗೆ ತರಲಿಲ್ಲ. ಕೇಂದ್ರ ಸರ್ಕಾರ ಪಿಎಂ ಸ್ವನಿಧಿ ಎಂಬ ಯೋಜನೆಯ ಹೆಸರಿನಲ್ಲಿ ಇಂತಹದೇ ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಬಡ ವ್ಯಾಪಾರಿಗಳಿಗೆ ₹50,000 ಸಾಲ ನೀಡುತ್ತಿದೆ ಎಂದು ಸಚಿವರು ಹೇಳಿದರು.

ನನಗೊಂದು ಅವಕಾಶ ಕೊಡಿ. ಇದೆಲ್ಲವನ್ನು ಸರಿ ಮಾಡುವ ಕೆಲಸ ಮಾಡುತ್ತೇನೆ. ಬಡವರಿಗೆ ನಿವೇಶನ ಕೊಟ್ಟು ಎಷ್ಟೋ ಕಾಲವಾಯಿತು. ರಸ್ತೆಗಳ ಗುಂಡಿಗಳನ್ನು ದಿನವೂ ಜನರು ನೋಡಿ ಕಷ್ಟಕಾರ್ಪಣ್ಯ ಅನುಭವಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಪಾಲಿಕೆ ಸದಸ್ಯರು ಇಲ್ಲವಾಗಿ ಎಷ್ಟೋ ವರ್ಷ ಆಯಿತು. ಕೊನೆ ಪಕ್ಷ ಪಾಲಿಕೆ ಸದಸ್ಯರಾದರು ಇದ್ದಿದ್ದರೆ ಅವರ ಮನೆಗೆ ಹೋಗಿ ಕಷ್ಟ ಹೇಳಿಕೊಳ್ಳುತ್ತಿದ್ದರು. ಗ್ರೇಟರ್ ಬೆಂಗಳೂರು ಮಾಡಿದ್ದಾರೆ, ಆದರೆ ಚುನಾವಣೆ ನಡೆಸುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಏನಾದರೂ ಮಾಡಿ ಮುಂದಕ್ಕೆ ಹಾಕಿಸುವ ಹುನ್ನಾರ ಮಾಡುತ್ತಲೇ ಇದ್ದಾರೆ. ಹೀಗಾದರೆ ಬೆಂಗಳೂರಿನ ಪರಿಸ್ಥಿತಿ ಎಲ್ಲಿಗೆ ಬರುತ್ತದೆ ಎಂಬುದನ್ನು ಜನತೆ ಯೋಚಿಸಬೇಕು ಎಂದು ಸಚಿವರು ಹೇಳಿದರು.

ಅಖಂಡ ಮನೆಗೆ ವಾಪಸ್ ಬಂದಿದ್ದಾರೆ;

ಮಾಜಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಂಡ ಸಚಿವ ಕುಮಾರಸ್ವಾಮಿ ಅವರು, ಅಖಂಡ ಶ್ರೀನಿವಾಸಮೂರ್ತಿ ಅವರು ತಮ್ಮ ಸ್ವಂತ ಮನೆಗೆ ವಾಪಸ್ಸಾಗಿದ್ದಾರೆ. ಅವರನ್ನು ಹೃದಯಪೂರ್ವಕವಾಗಿ ಪಕ್ಷಕ್ಕೆ ಬರಮಾಡಿಕೊಡಿದ್ದೇನೆ. ಮುಂದಿನ ದಿನಗಳಲ್ಲಿ ಅವರು ಬೆಂಗಳೂರು ಸೇರಿ ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಾರೆ ಎಂದರು.

ಅಖಂಡ ಶ್ರೀನಿವಾಸ್ ಮೂರ್ತಿ ಅವರನ್ನು ಕಾಂಗ್ರೆಸ್ ಪಕ್ಷ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಏನೆಲ್ಲಾ ಕಹಿ ಘಟನೆಗಳು ನಡೆದವು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈ ಬಹಿರಂಗ ಸಭೆಯಲ್ಲಿ ನಾನು ಚರ್ಚೆ ಮಾಡಲು ಬಯಸುವುದಿಲ್ಲ. ಅವರ ಮನೆಗೆ ಬೆಂಕಿ ಹಾಕಲಾಯಿತು. ಆದರೂ ಅವರು ಎದೆಗುಂದದೆ ತನ್ನನ್ನು ನಂಬಿದ ಕಾರ್ಯಕರ್ತರ ಜೊತೆ ನಿಂತರು. ಕೆಲವರು ಪರಿಸ್ಥಿತಿಯ ದುರ್ಲಾಭ ಪಡೆಯಲು ಪ್ರಯತ್ನಿಸಿದರು ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಪುಲಕೇಶಿ ನಗರ ವಿಶಿಷ್ಟವಾದ ಕ್ಷೇತ್ರ. ಈ ಕ್ಷೇತ್ರಕ್ಕೂ ನನಗೂ ಅವಿನ ಭಾವ ಸಂಬಂಧ ಇದೆ. ಕಾರ್ಯಕ್ರಮ ನಡೆಯುತ್ತಿರುವ ಪಿಳ್ಳಣ್ಣ ಗಾರ್ಡನ್ ನ ಈ ಕ್ರೀಡಾಂಗಣ ನನಗೆ ಚಿರಪರಿಚಿತ. ಎಷ್ಟೋ ಸಂದರ್ಭದಲ್ಲಿ ಇಲ್ಲಿನ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಜನರನ್ನು ಭೇಟಿಯಾಗಿದ್ದೇನೆ. ಹೀಗಾಗಿ ಪಕ್ಷವನ್ನು ಸಂಘಟಿಸುವುದು ಸವಾಲಿನ ಕೆಲಸವಲ್ಲ. ಅಖಂಡ ಶ್ರೀನಿವಾಸ ಮೂರ್ತಿ ಸಮರ್ಥವಾಗಿ ಕಾರ್ಯಕರ್ತರನ್ನು ಸಂಘಟಿಸಲಿದ್ದಾರೆ ಎಂದು ಸಚಿವರು ಹೇಳಿದರು.

ನಾನು ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ತತ್ವದ ಅಡಿಯಲ್ಲಿ ರಾಜಕಾರಣ ಮಾಡುವವನು. ಎಲ್ಲರನ್ನೂ ಒಳಗೊಂಡು ಉತ್ತಮ ಸಮಾಜಕ್ಕಾಗಿ ದುಡಿಮೆ ಮಾಡುವ ಉದ್ದೇಶ ನನ್ನದು. ನನ್ನ ಇಡೀ ಜೀವಮಾನದ ಉದ್ದಕ್ಕೂ ಇದನ್ನೇ ಮಾಡಿಕೊಂಡು ಬಂದಿದ್ದೇನೆ ಎಂದರು ಕೇಂದ್ರ ಸಚಿವರು.

ಈ ಸಂದರ್ಭದಲ್ಲಿ ಮಾತನಾಡಿದ ಅಖಂಡ ಶ್ರೀನಿವಾಸ ಮೂರ್ತಿ ಅವರು, ಜೆಡಿಎಸ್ ಪಕ್ಷಕ್ಕೆ ನಾನು ಹೊರಗಿನವನಲ್ಲ. ಯಾರದೋ ಮಾತು ಕೇಳಿ ಹೊರಕ್ಕೆ ಹೋಗಬೇಕಾಯಿತು. ಅದರಿಂದ ಉಂಟಾದ ಕಷ್ಟಗಳೇನು ಎಂಬುದು ನನಗೆ ಅರಿವಾಗಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ನನ್ನ ನಾಯಕರು. ಅವರಲ್ಲಿ ವಿಶ್ವಾಸವಿರಿಸಿ ಜೆಡಿಎಸ್ ಸೇರಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗಾಗಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕರು ಹಾಗೂ ಪಕ್ಷದ ಗ್ರೇಟರ್ ಬೆಂಗಳೂರು ಅಧ್ಯಕ್ಷ ಎಚ್ಎಂ ರಮೇಶ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೊತೆಗೆ ಕ್ಷೇತ್ರದ ಹಿರಿಯ ಮುಖಂಡರು ಹಾಗೂ ಅಸಂಖ್ಯಾತ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಸಂಖ್ಯಾತ ಬೆಂಬಲಿಗರು ಜೆಡಿಎಸ್ ಪಕ್ಷವನ್ನು ಸೇರಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!