ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಹಾವೇರಿ-ಗದಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ತಾಲೂಕಿನ ಬೆಣಚಮಟ್ಟಿ, ನಾಗರಸಕೊಪ್ಪ ಹಾಗೂ ನಾಗರಸಕೊಪ್ಪ ತಾಂಡಾದಲ್ಲಿ ಸೇರಿ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಬಿರುಸಿನ ಪ್ರಚಾರ ನಡೆಸಿದರು.
ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಮತ್ತು ವಿಶ್ವ ಮಟ್ಟದಲ್ಲಿ ಭಾರತವನ್ನು ವಿಶ್ವಗುರುವನ್ನಾಗಿಸುವ ದಿಸೆಯಲ್ಲಿ ಪ್ರಧಾನಿ ಮೋದಿ ಅವರು ಕೈಗೊಂಡಿರುವ ರಾಜತಾಂತ್ರಿಕ ವಿಷಯಗಳಿಂದ ವಿಶ್ವದ ಬಲಿಷ್ಠ ರಾಷ್ಟçಗಳ ಪಟ್ಟಿಯಲ್ಲಿ ಭಾರತವು ಸ್ಥಾನವನ್ನು ಪಡೆದಿದೆ. ಅಲ್ಲದೆ ಮೋದಿ ಅವರ ಜನಪರ ಹಾಗೂ ಪಾರದರ್ಶಕ ಆಡಳಿತದೊಂದಿಗೆ ದೇಶದ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದ್ದಾರೆ.
ಪರಿಣಾಮ, ಕೋಟ್ಯಾಂತರ ಜನರ ಆಶಯವಾಗಿದ್ದ ರಾಮಮಂದಿರ ನಿರ್ಮಾಣ ಸೇರಿ ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ ಎಂದ ಅವರು, ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವು ಜನವಿರೋಧಿ ಹಾಗೂ ರೈತವಿರೋಧಿ ಎನ್ನುವದಕ್ಕೆ ಪುಷ್ಠಿ ನೀಡುವ ಹಲವಾರು ಯೋಜನೆಗಳ ಜತೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಅನೇಕ ಹಗರಣಗಳು ದೇಶದ ಜನತೆಯ ನೆನಪಿನಿಂದ ಮಾಸುತ್ತಿಲ್ಲ. ಆದರೆ ಮೋದಿ ಅವರು ದೇಶದ ಪ್ರಧಾನಿ ಆದ ದಿನದಿಂದ ಇಂದಿನವರೆಗೂ ಸಹ ದೇಶದಲ್ಲಿ ಪಾರದರ್ಶಕ ಆಡಳಿತಕ್ಕೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಪ್ರಧಾನಿ ಮೋದಿ ಪರವಾದ ಘೋಷಣೆಗಳನ್ನು ಯುವ ಸಮೂಹ ಕೂಗುತ್ತಿದೆ ಎಂದರು.
ಈ ವೇಳೆ ಉಮೇಶ ಮಲ್ಲಾಪೂರ, ನೀಲಪ್ಪ ಗುರಿಕಾರ, ಮುತ್ತಯ್ಯ ಕಾರಡಗಿಮಠ, ಅಂದಪ್ಪ ಅಂಗಡಿ, ಕೃಷ್ಣಾ ಪೂಜಾರ, ಪರಶುರಾಮ ಗಡಾದ, ಚನ್ನಬಸಯ್ಯ ಹಿರೇಮಠ, ಬಸಯ್ಯ ಹಿರೇಮಠ, ಶೇಖಪ್ಪ ಪೂಜಾರ, ತುಳಜಪ್ಪ ಮಾಳಿ, ಮಲ್ಲು ಕುರಿ, ಕಳಕಪ್ಪ ಅಗಸಿಮುಂದಿನ ಸೇರಿ ಇತರರು ಇದ್ದರು.
ಬಿಜೆಪಿ ರೋಣ ಮಂಡಲದ ಅಧ್ಯಕ್ಷ ಮುತ್ತಣ್ಣ ಕಡಗದ ಮಾತನಾಡಿ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಆಡಳಿತ ಒಂದೆಡೆಯಾದರೆ, ೧ ಲಕ್ಷ ೫೦ ಸಾವಿರ ಕೋಟಿ ಸಾಲ ತಂದಿರುವ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಜನರನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. ಕಳಸಾ ಬಂಡೂರಿ ಯೋಜನೆ ಒಂದು ಹಂತಕ್ಕೆ ಬಂದು ನಿಲ್ಲಲು ಬೊಮ್ಮಾಯಿ ಅವರು ಪ್ರಮುಖರು. ವಿಪಕ್ಷಗಳಿಗೆ ತಕ್ಕಪಾಠ ಕಲಿಸಲು ಹಾಗೂ ಭಾರತವನ್ನು ಮತ್ತಷ್ಟು ಬಲಿಷ್ಠ ಹಾಗೂ ಸದೃಢ ದೇಶವನ್ನಾಗಿಸಲು ಹಾವೇರಿ-ಗದಗ ಲೋಕಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರ ಕೈ ಬಲಪಡಿಸೋಣ ಎಂದರು.



