ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಐತಿಹಾಸಿಕ ಶ್ರೀ ಕರಿಯಮ್ಮದೇವಿಯ 95ನೇ ಜಾತ್ರಾ ಮಹೋತ್ಸವವು ಏಪ್ರೀಲ್ 8ರಿಂದ 10ರವರೆಗೆ 3 ದಿನಗಳ ಕಾಲ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಚಂಡಿಕಾಹೋಮ, ರಂಗೋಲಿ ಸ್ಪರ್ಧೆ, ಬೆಳ್ಳಿ ಉತ್ಸವ ಮೂರ್ತಿ ದರ್ಶನ, ಕಡುಬಿನ ಕಾಳಗ ನಡೆಯಲಿದೆ. ಈ ಜಾತ್ರೆ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅತೀ ವಿಜೃಂಭಣೆಯಿಂದ ನಡೆಯಲಿದೆ ಎಂದು ಜಾತ್ರಾ ಸಮಿತಿ ಗೌರವಾಧ್ಯಕ್ಷ ಎಲ್.ಡಿ. ಚಂದಾವರಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತ್ರೆಯ ಮುನ್ನ ಸೋಮವಾರ ಕರಿಯಮ್ಮದೇವಿ ಬೆಳ್ಳಿ ಉತ್ಸವ ಮೂರ್ತಿಯನ್ನು ಭಕ್ತರ ದರ್ಶನಕ್ಕೆ ಇಡಲಾಗುವುದು. ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದು, ಶ್ರೀ ಕರಿಯಮ್ಮದೇವಿ ಸುಧಾರಣಾ ಸಮಿತಿ ಅಧ್ಯಕ್ಷ ಸಿ.ಕೆ. ಮಾಳಶೇಟ್ಟಿ ಉದ್ಘಾಟಿಸಲಿದ್ದಾರೆ ಎಂದರು.
ಸಾಯಂಕಾಲ 6ಗಂಟೆಗೆ ಜಾತ್ರಾ ಪ್ರಾರಂಭೋತ್ಸವ ನಡೆಯಲಿದ್ದು, ದಿವ್ಯ ಸಾನ್ನಿಧ್ಯವನ್ನು ಷ. ಬ್ರ. ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಅಧ್ಯಕ್ಷತೆಯನ್ನು ಎಲ್.ಡಿ. ಚಂದಾವರಿ, ಮುಖ್ಯ ಅತಿಥಿಯಾಗಿ ನಗರಸಭೆ ಸದಸ್ಯರಾದ ವಿಜಯಲಕ್ಷ್ಮಿ ದಿಂಡೂರ, ಜಾತ್ರಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್.ಪಿ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ. ನಂತರ ದಾನಿಗಳಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಏ. 9ರಂದು ಸಕಲ ವಾದ್ಯಗಳೊಂದಿಗೆ ಶ್ರೀದೇವಿಯ ಪಾಲಕಿ ಉತ್ಸವ, ಕುಂಭಮೇಳ, ಶ್ರೀಚಕ್ರ ಮಹಿಳಾ ಕಲಾ ತಂಡದಿಂದ ಡೊಳ್ಳು ಕುಣಿತ ಮತ್ತು ಗೊಂಬೆ ಕುಣಿತಗಳೊಂದಿಗೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದ್ದು, ಸಾಯಂಕಾಲ ಮಹಾರಥೋತ್ಸವ ನಡೆಯಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಜಾತ್ರಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್.ಪಿ ವಹಿಸಿಕೊಳ್ಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿ ಕಾರ್ಯಾಧ್ಯಕ್ಷರಾದ ಸಿ.ಕೆ. ಮಾಳಶೆಟ್ಟಿ, ಶಶಿಧರ ದಿಂಡೂರ, ಬಸವರಾಜ ನರೆಗಲ್, 2024ನೇ ಸಾಲಿನ ಶ್ರೀ ಕರಿಯಮ್ಮದೇವಿ ಜಾತ್ರಾ ಸಮಿತಿ ಅಧ್ಯಕ್ಷರಾದ ಜಗದೀಶ್ ಎಸ್.ಪಿ, ವಿಜಯಲಕ್ಷ್ಮಿ ದಿಂಡೂರ, ಶಶಿಧರ್ ದಿಂಡೂರ, ಶಂಕರ ಹಾನಗಲ್ಲ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದ ಕೊನೆಯ ದಿನ ಏ. 10ರಂದು ಅನ್ನಸಂತರ್ಪಣೆ ನಡೆಯಲಿದ್ದು, ಸಾಯಂಕಾಲ 6 ಗಂಟೆಗೆ ಕಡುಬಿನ ಕಾಳಗ, ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳ ಅಧ್ಯಕ್ಷತೆಯನ್ನು ಶ್ರೀ ಕರಿಯಮ್ಮದೇವಿ ಬಡಾವಣೆ ಸುಧಾರಣಾ ಸಮಿತಿ ಕಾರ್ಯಾಧ್ಯಕ್ಷರಾದ ಸಿ.ಕೆ ಮಾಳಶೆಟ್ಟಿ ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಮಂಜುನಾಥ ಪೂಜಾರ, ಗೋವಿಂದಪ್ಪ ಗೌಡಪ್ಪಗೋಳ, ಎಲ್.ಡಿ. ಚಂದಾವರಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.