ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕೋಡಿಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಮಂಗಳವಾರದಿಂದ ಆರಂಭವಾಗಿದ್ದು, ಎರಡು ದಿನಗಳ ಕಾಲ ಅದ್ದೂರಿಯಾಗಿ ಜರುಗಲಿದೆ. ನಂತರ ಮೂರು ದಿನಗಳ ಕಾಲ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ.
ಪಟ್ಟಣದ ಕಲಾವಿದ ರಮೇಶ ತೊರಗಲ್ ಅವರ ಮನೆಯಲ್ಲಿ ದೇವಿಯ ಮೂರ್ತಿಗೆ ಬಣ್ಣ ನೀಡಿ ಸಿದ್ಧಪಡಿಸಲಾಗಿದ್ದು, ಮಂಗಳವಾರ ಮುಂಜಾನೆ ಅವರ ಮನೆಯಿಂದ ಸುಮಂಗಲೆಯರು ದೇವಿಗೆ ಪೂಜೆ ಸಲ್ಲಿಸಿ, ಉಡಿ ತುಂಬುವ ಕಾರ್ಯವನ್ನು ನೆರವೇರಿಸಿದರು. ಅಲಂಕಾರಗೊಂಡ ಬಂಡಿಯಲ್ಲಿ ದೇವಿಯ ಭವ್ಯ ಮೆರವಣಿಗೆಯು ಪ್ರಾರಂಭಗೊಂಡು, ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿ ಮದ್ಯಾಹ್ನದ ವೇಳೆಗೆ ದೇವಸ್ಥಾನಕ್ಕೆ ಆಗಮಿಸಿತು.
ಪಟ್ಟಣದ ಹಾಗೂ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದುಕೊಂಡರು.



