ವಿಜಯಸಾಕ್ಷಿ ಸುದ್ದಿ, ರೋಣ : ರಾಜ್ಯ ಸರಕಾರ ತನ್ನ ಮೊದಲ ಬಜೆಟ್‌ನಲ್ಲಿ ರೋಣ ನಗರಕ್ಕೆ 50 ಕೋಟಿ ರೂ ವೆಚ್ಚದ ಜೆಟಿಟಿಸಿ ತರಬೇತಿ ಕೇಂದ್ರವನ್ನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರಂಭವಾಗಲಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗುರುವಾರ ರೋಣ ನಗರಕ್ಕೆ ಜೆಟಿಟಿಸಿ ಆಡಳಿತ ಮಂಡಳಿಯ ಅಧಿಕಾರಿಗಳು ಸ್ಥಳ ವಿಕ್ಷಣೆಗೆ ಆಗಮಿಸಿದ ಸಂಧರ್ಭದಲ್ಲಿ ಶಾಸಕ ಜಿ.ಎಸ್. ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ರೋಣ ನಗರ ಸೇರಿದಂತೆ ತಾಲೂಕಿನಲ್ಲಿ ತರಬೇತಿ ಶಿಕ್ಷಣ ಕೇಂದ್ರಗಳ ಆವಶ್ಯಕತೆಯಿದೆ ಎಂಬುದನ್ನು ಮನಗಂಡು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದೆ. ಸರಕಾರ ನನ್ನ ಮನವಿಗೆ ಸ್ಪಂದಿಸಿ ತಾಲೂಕಿಗೆ ಜೆಟಿಟಿಸಿ ಮಹಾವಿದ್ಯಾಲಯವನ್ನು ಮಂಜೂರು ಮಾಡಿದ್ದು, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿಯಾಗಿ ಸಿಗಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ಮಹಾವಿದ್ಯಾಲಯದ ಹಿರಿಯ ಅಧಿಕಾರಿ ಲಕ್ಷ್ಮಿಕಾಂತ ಮಾತನಾಡಿ, ಜೆಟಿಟಿಸಿ ಕೇಂದ್ರದಲ್ಲಿ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ವಿದೇಶದಲ್ಲಿಯೂ ಮಾನ್ಯತೆ ಇರಲಿದೆ. ಅಲ್ಲದೆ, ಸರಕಾರದ ಸಂಸ್ಥೆಯಾಗಿರುವುದರಿಂದ ಮಹಾವಿದ್ಯಾಲಯದೊಂದಿಗೆ 365 ಪ್ರತಿಷ್ಠಿತ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ನಿರುದ್ಯೋಗ ಸಮಸ್ಯೆ ದೂರಾಗಲಿದೆ ಎಂದರು.
ಈಗಾಗಲೇ ರಾಜ್ಯದಲ್ಲಿ 35 ಜೆಟಿಟಿಸಿ ಕೇಂದ್ರ ವಿದ್ಯಾರ್ಥಿಗಳಿಗೆ ಅನೇಕ ಮಹತ್ತರ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದ್ದು, ಶಾಸಕರ ಇಚ್ಛೆಯಂತೆ ರೋಣ ನಗರದಲ್ಲಿ ತನ್ನ ಕೇಂದ್ರವನ್ನು ಈ ಸಾಲಿನಿಂದ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ಮಹಾವಿದ್ಯಾಲಯದಲ್ಲಿ ಸಿಗುವ ಶೈಕ್ಷಣಿಕ ಚಟುವಟಿಕೆಗಳ ಲಾಭವನ್ನು ಪಡೆದುಕೊಳ್ಳಬೇಕು ಎಂದ ಅವರು, ನೂತನ ಕಟ್ಟಡ ನಿರ್ಮಾಣವಾಗುವವರೆಗೆ ಬದಾಮಿ ರಸ್ತೆಯ ಗಿರಡ್ಡಿ ಮಹಾವಿದ್ಯಾಲಯದಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸಲಾಗುವುದು ಎಂದರು.
ಐ.ಎಸ್. ಪಾಟೀಲ, ಅರವಿಂದ್, ಕೆ.ವಿ. ನಾರಾಯಣ್, ಮಾರುತಿ ಭಜಂತ್ರಿ, ಬಸವರಾಜ ನವಲಗುಂದ ಉಪಸ್ಥಿತರಿದ್ದರು.
ಜೆಟಿಟಿಸಿಯಲ್ಲಿ ಸದ್ಯ ನಾಲ್ಕು ಕೋರ್ಸ್ಗಳನ್ನು ಆರಂಭಿಸಲಾಗುತ್ತಿದ್ದು, 260 ವಿದ್ಯಾರ್ಥಿಗಳಿಗೆ ಅವಕಾಶ ಸಿಗಲಿದೆ. ಇನ್ನು ನಾಲ್ಕು ವರ್ಷದ ಡಿಪ್ಲೋಮಾ ಕೋರ್ಸ್ ಮುಗಿಸಿದ ತಕ್ಷಣ ಒಡಂಬಡಿಕೆ ಮಾಡಿಕೊಂಡ ಕಂಪನಿಗಳಲ್ಲಿ 15ರಿಂದ 20 ಸಾವಿರ ಭತ್ಯೆ ಪಡೆದು ಮತ್ತಷ್ಟು ತರಬೇತಿ ಪಡೆಯುವ ಅವಕಾಶವಿದೆ. ಜೊತೆಗೆ ವಿದೇಶದಲ್ಲಿಯೂ ಕಾರ್ಯನಿರ್ವಹಿಸಲು ಜೆಟಿಟಿಸಿ ಸಹಕರಿಸಲಿದೆ.
– ಲಕ್ಷ್ಮಿಕಾಂತ.
ಜೆಟಿಟಿಸಿ ಹಿರಿಯ ಅಧಿಕಾರಿ.



