ವಿಜಯಸಾಕ್ಷಿ ಸುದ್ದಿ, ಗದಗ : ಹಲವಾರು ಸವಾಲಿನ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ಪೈಕಿ ಸ್ಕಿಜೋಫ್ರೇನಿಯಾ ಅತ್ಯಂತ ದೀರ್ಘಕಾಲದ ಕಾಯಿಲೆಯಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ, ಈ ಅಸ್ವಸ್ಥತೆಯು ಕುಟುಂಬಗಳಲ್ಲಿ ಆನುವಂಶಿಕವಾಗಿ ಕಂಡುಬರುತ್ತದೆ ಎಂದು ಅಮರಯ್ಯ ಚಿನ್ನಯ್ಯನಮಠ ಹೇಳಿದರು.
ನಗರದ ವಿ.ಪಿ. ಗಾಲಾ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸ್ನಲ್ಲಿ ಹಮ್ಮಿಕೊಂಡಿದ್ದ `ವಿಶ್ವ ಸ್ಕಿಜೋಫ್ರೇನಿಯಾ’ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಅಸ್ವಸ್ಥತೆಯು ಭ್ರಮೆ, ಅಸಂಘಟಿತ ಚಿಂತನೆ, ಮಾತನಾಡುವಲ್ಲಿ ಅಸಂಗತತೆ ಮತ್ತು ಅಭಾಗಲಬ್ಧ ನಡವಳಿಕೆಯಿಂದ ನಿರೂಪಿಸಲ್ಪಟ್ಟಿದೆ. ಸ್ಕಿಜೋಫ್ರೇನಿಯಾ ಹೊಂದಿರುವ ಜನರು ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ನಿರ್ವಹಿಸಲು ಮತ್ತು ಅವುಗಳನ್ನು ವ್ಯಕ್ತಪಡಿಸಲು ಕಷ್ಟಪಡುತ್ತಾರೆ. ಇದು ತುಂಬಾ ಗಂಭೀರವಾದ ಸಮಸ್ಯೆಯಾಗಿದೆ. ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರಪಂಚದಾದ್ಯಂತ ಸುಮಾರು 20 ಲಕ್ಷ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಕ್ಷೆ ರಚನಾ ಗಾಲಾ, ಸೆಕ್ರೆಟರಿ ಪಂಕಜ್ ಗಾಲಾ, ನಿರ್ದೇಶಕ ಗುಂಜನ ಗಾಲಾ, ಕಾಲೇಜಿನ ಎಲ್ಲ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.