ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಭಕ್ತರ ಉದ್ಧಾರವೇ ಗುರುವಿನ ಸತ್ಕಾರ್ಯವಾಗಿದೆ. ಈ ದಿಸೆಯಲ್ಲಿ ಭಕ್ತಾಧಿಗಳು ಹಿಂದೆ ಗುರುಗಳನ್ನು ಇಟ್ಟುಕೊಂಡು ಮುಂದೆ ಇರುವ ತಮ್ಮ ತಮ್ಮ ಗುರಿಯನ್ನು ಸಾಧಿಸಿಕೊಳ್ಳಬೇಕು ಎಂದು ಗವಿಸಿದ್ಧಲಿಂಗ ಮಹಾಸ್ವಾಮಿಗಳು ಸಲಹೆ ನೀಡಿದರು.
ಸಮೀಪದ ಹರ್ಲಾಪೂರ ಕೊಟ್ಟೂರೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಲಿಂಗೈಕ್ಯರಾದ ದ್ವಿತೀಯ ಮತ್ತು ತೃತೀಯ ಪೀಠಾಧಿಪತಿಗಳಾದ ಕರಿಬಸವ ಸ್ವಾಮಿಗಳು ಹಾಗೂ ನೀಲಕಂಠ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಲಿಂಗೈಕ್ಯರಾದ ಸಂತರ ಸ್ಮರಣೆ ಮಾಡುವ ಕಾರಣವೇನೆಂದರೆ, ಅವರ ಆದರ್ಶ ಗುಣಗಳು, ಸಾಮಾಜಿಕ ಬದುಕು ನಮಗೆಲ್ಲಾ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದಲೇ ವಿನಃ ಕೇವಲ ಭಾವಚಿತ್ರ ಪೂಜೆ ಮಾಡುವುದಲ್ಲ. ಈ ನಿಟ್ಟಿನಲ್ಲಿ ಕೊಟ್ಟೂರೇಶ್ವರ ಶ್ರೀಗಳು ನಮ್ಮಂತಹ ನೂತನ ಸ್ವಾಮೀಜಿಗಳಿಗೆ ಆದರ್ಶವಾಗಿದ್ದಾರೆ ಎಂದರು.
ಹರ್ಲಾಪೂರ ಗೆಜ್ಜೆಸಿದ್ದೇಶ್ವರ ಮಠದ ಶಿವಯೋಗಿ ರಾಮನಾಥ ಮಹಾಸ್ವಾಮಿಗಳು ಮಾತನಾಡಿ, ಜೀವನದಲ್ಲಿ ಅನೇಕ ಕಷ್ಟಗಳು ಬರುತ್ತವೆ. ಆ ಕಷ್ಟಗಳನ್ನು ಎದುರಿಸಲು ಗುರುನಾಥನ ಪ್ರೇರಣೆ ಬೇಕಾಗಿದ್ದು, ಸದಾ ನಾವೆಲ್ಲರೂ ಗುರುವಿನ ಸ್ಮರಣೆ ಮಾಡುವುದು ಅವಶ್ಯವಿದೆ ಎಂದರು.
ಹಳ್ಳಿಗುಡಿ ಶಂಕ್ರಯ್ಯಜ್ಜನವರು ಮಾತನಾಡಿ, ಹರ್ಲಾಪೂರ ಮತ್ತು ಹಳ್ಳಿಗುಡಿ ಗ್ರಾಮದ ಭಕ್ತರಿಗೆ ಕೊಟ್ಟೂರೆಶ್ವರ ಶ್ರೀಗಳು ಅಮೂಲ್ಯವಾದ ಆಸ್ತಿಯಾಗಿದ್ದು, ಅವರು ನಮ್ಮ ಬದುಕಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಡಾ. ಕೊಟ್ಟೂರೇಶ್ವರ ಶ್ರೀಗಳು ಮಾತನಾಡಿ, ಕಳೆದ 15 ದಿನಗಳಿಂದ ನಡೆದ ಜಾತ್ರಾ ಮಹೋತ್ಸವ ಯಶಸ್ಸಿಗೆ ಸೇವೆ ಸಲ್ಲಿಸಿದ ಸರ್ವ ಭಕ್ತರಿಗೆ ಅಭಿನಂದನೆಗಳನ್ನು ತಿಳಿಸಿ, ತಮ್ಮೆಲ್ಲರ ಸೇವಾ ಮನೋಭಾವನೆ ಹೀಗೆಯೇ ಮುಂದುವರೆಯಲಿ ಎಂದರು.
ಇದೇ ಸಂದರ್ಭದಲ್ಲಿ ಕೊಟ್ಟೂರೇಶ್ವರ ಶ್ರೀಗಳಿಗೆ ಚಂದ್ರಶೇಖರ ಹಿರೇಮಠ ಅವರು ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಿದರು. ಸೇವೆ ಸಲ್ಲಿಸಿದ ಮಹನೀಯರನ್ನು ಶ್ರೀಗಳು ಸನ್ಮಾನಿಸಿದರು. ನಿವೃತ್ತ ಶಿಕ್ಷಕ ರಾಮಣ್ಣ ಬೆಳಧಡಿ ಉಪಸ್ಥಿತರಿದ್ದರು. ಕೆ.ಬಿ. ವೀರಾಪೂರ, ನಾಗೇಂದ್ರ ಅರ್ಕಸಾಲಿ ಸಂಗೀತ ಸೇವೆ ನೀಡಿದರು. ಶ್ರೀದೇವಿ ಹರಕುಣಿ ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ಕೆ.ಬಿ. ಕೊಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ದಲಿಂಗಯ್ಯ ಹಿರೇಮಠ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು. ಡಾ. ಎಸ್.ಸಿ. ಸರ್ವಿ ವಂದಿಸಿದರು.
ಕೊಣ್ಣೂರು ಡಾ ಶಿವಾನಂದ ಸ್ವಾಮಿಗಳು ಮಾತನಾಡಿ, ಪ್ರತೀ ಧಾರ್ಮಿಕ ಕ್ಷೇತ್ರದಲ್ಲಿ ಶರಣರು, ಸಂತರು, ಮನುಷ್ಯನ ಜೀವನಕ್ಕೆ ಬೇಕಾಗುವ ಮೌಲ್ಯಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳು ನಮಗೆ ಆದರ್ಶವಾಗಿವೆ ಎಂದರು.



