ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಆರಂಭಿಸುವಂತೆ ಹಾಗೂ ಪದವಿ ಕಾಲೇಜಿನಲ್ಲಿ ಖಾಲಿ ಇರುವ ಅಧ್ಯಾಪಕರ ನೇಮಕಕ್ಕೆ ಒತ್ತಾಯಿಸಿ ಬುಧವಾರ ಎಸ್‌ಎಫ್‌ಐ ಕಾರ್ಯಕರ್ತರು ಶಾಸಕ ಜಿ.ಎಸ್. ಪಾಟೀಲ್‌ಗೆ ಮನವಿ ಸಲ್ಲಿಸಿದರು.
ಸ್ಥಳೀಯ ಬಿಎಸ್‌ಎಸ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2023-24ನೇ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕರಿಗೆ ಎಸ್‌ಎಫ್‌ಐ ಸಂಘಟನೆಯ ಕಾರ್ಯಕರ್ತರು ಮನವಿ ನೀಡಿ, ಪಟ್ಟಣವು ಶೈಕ್ಷಣಿಕವಾಗಿ ಬೆಳೆಯುತ್ತಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಪಟ್ಟಣದಲ್ಲಿ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್ ಆರಂಭವಾಗದ ಪರಿಣಾಮ ಪಟ್ಟಣ ಸೇರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಕಷ್ಟವನ್ನು ಅನುಭವಿಸುವಂತಾಗಿದೆ.
ಹೀಗಾಗಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಸಕ್ತ ವರ್ಷವೇ ಹಾಸ್ಟೆಲ್ ತರಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸುವುದರ ಜತೆಗೆ ಪದವಿ ಕಾಲೇಜಿನಲ್ಲಿ ಖಾಲಿ ಇರುವ ಅಧ್ಯಾಪಕರ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಕ ಮಾಡಬೇಕು. ಸ್ನಾತಕೋತ್ತರ ಪದವಿ ಕೇಂದ್ರ ಪ್ರಾರಂಭ ಮತ್ತು ಪ್ರಯೋಗಾಲಯಗಳಿಗೆ ಅನುದಾನ ನೀಡುವುದರೊಂದಿಗೆ ಶಾಸಕರ ಅನುದಾನದಲ್ಲಿ ಕಾಲೇಜಿನ ಅಭಿವೃದ್ಧಿಗೆ ಹೆಚ್ಚು ಹಣ ನೀಡುಬೇಕು ಎಂದು ವಿನಂತಿಸಿದರು.
ಮನವಿ ಸ್ವೀಕರಿಸಿದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಮೆಟ್ರಿಕ್ ನಂತರದ ಹಾಸ್ಟೆಲ್ ಆರಂಭ ಕುರಿತು ಸಿಎಂ ಮತ್ತು ಸಂಬಂಧಿಸಿದ ಸಚಿವರಿಗೆ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಪ್ರಸಕ್ತ ವರ್ಷ ಅಥವಾ ಮುಂದಿನ ವರ್ಷ ಹಾಸ್ಟೆಲ್ ತರುವುದರೊಂದಿಗೆ ಶಾಸಕರ ಅನುದಾನದಲ್ಲಿ ಅಂದಾಜು ರೂ.25 ಲಕ್ಷ ಹಣವನ್ನು ಕಾಲೇಜಿನ ಅಭಿವೃದ್ಧಿಗೆ ನೀಡುವ ಭರವಸೆ ನೀಡಿದರು.
ಈ ವೇಳೆ ಎಸ್‌ಎಫ್‌ಐನ ಗಣೇಶ ರಾಠೋಡ್, ಚಂದ್ರು ರಾಠೋಡ್, ವಿದ್ಯಾರ್ಥಿಗಳಾದ ಅನಿಲ್, ಬಸವರಾಜ, ಸುನೀಲ್ ಸೇರಿ ಇತರರು ಇದ್ದರು.