ಶಿವಮೊಗ್ಗ:- ಮಳೆಯ ಆರ್ಭಟದಿಂದ ಆಗುಂಬೆಯಲ್ಲಿ ಲಘು ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದು, ಮಣ್ಣು ತೆರವು ಕಾರ್ಯ ಆರಂಭವಾಗಿದೆ.
ಭಾರಿ ಮಳೆಗೆ ಶಿವಮೊಗ್ಗ ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಗುಡ್ಡ ಮತ್ತಷ್ಟು ಕುಸಿದರೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ
ಈಗಾಗಲೇ ಈ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ತೀರ್ಥಹಳ್ಳಿ-ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಸಂಚರಿಸುತ್ತಿವೆ. 3 ವರ್ಷಗಳ ಹಿಂದೆ ಈ ಘಾಟಿಯಲ್ಲಿ ಗುಡ್ಡ ಕುಸಿದು ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿತ್ತು