ಬೆಂಗಳೂರು :– ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ.
ಟಿಕೆಟ್ ದರ ಏರಿಕೆ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸುಳಿವು ನೀಡಿದ್ದಾರೆ.
ಒಂದು ಮೆಟ್ರೋ ಸ್ಟೇಷನ್ಗೆ ಪಿಎಸ್ಡಿ ಅಳವಡಿಸಲು 8 ರಿಂದ 10 ಕೋಟಿ ವೆಚ್ಚವಾಗಲಿದೆ. ಸದ್ಯ ಕಾರ್ಯಾಚರಣೆಯಲ್ಲಿರುವ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೆ ಪಿಎಸ್ಡಿ ಅಳವಡಿಸಲು ಸುಮಾರು 700 ರಿಂದ 800 ಕೋಟಿ ರೂಪಾಯಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಅದನ್ನು ಪ್ರಯಾಣಿಕರ ಮೇಲೆ ಹೊರೆ ಹಾಕಬೇಕಾಗುತ್ತದೆ. ಹಾಗಾಗಿ ಟಿಕೆಟ್ ದರ ಏರಿಕೆ ಮಾಡಿದರೆ ಪಿಎಸ್ಡಿಗೆ ಬೇಕಾದ ಹಣ ಹೊಂದಿಸಲು ಸರಿ ಆಗುತ್ತದೆ ಎನ್ನುವುದು ನಮ್ಮ ಮೆಟ್ರೋ ಯೋಚನೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುದಾನ ಕೇಳಿ ಪಿಎಸ್ಡಿ ಹಾಕಿ, ಅದನ್ನು ಬಿಟ್ಟು ಪ್ರಯಾಣಿಕರ ಮೇಲೆ ಹೊರೆ ಹಾಕುವುದು ಸರಿಯಲ್ಲ ಎಂದು ಪ್ರಯಾಣಿಕ ಪ್ರಸಾದ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.