ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ : ಸ್ಥಳೀಯ ಗಂಜಿಪೇಟೆಯ ಪಲಿಮಾರುಮಠ ಉಡುಪಿಯ ರಾಘವೇಂದ್ರ ಮಠದಲ್ಲಿ ಗುರು ರಾಘವೇಂದ್ರ ಸದ್ಭಕ್ತ ಮಂಡಳಿ ವತಿಯಿಂದ ಗುರುರಾಘವೇಂದ್ರಸ್ವಾಮಿಗಳ ಉತ್ತರಾರಾಧನೆ ಪ್ರಯುಕ್ತ ಗುರುವಾರ ಸಕಲ ಸದ್ಭಕ್ತರು ರಾಯರ ಅಷ್ಟೋತ್ತರ ಪಠಿಸುವ ಮೂಲಕ ವಿಶೇಷ ಪೂಜಾ ಕಾರ್ಯಗಳು ಶೃದ್ಧಾಭಕ್ತಿಯಿಂದ ನೆರವೇರಿಸಿದರು.
ಬೆಳಿಗ್ಗೆ ಪ್ರಧಾನ ಅರ್ಚಕ ವೆಂಕಟೇಶ ಆಚಾರ್ಯ ಜೋಶಿ ಹಾಗೂ ಅಡವಿ ಆಚಾರ್ಯ ಗಂಗನಾಳ ಅವರಿಂದ ರಾಯರ ವೃಂದಾವನಕ್ಕೆ ಮಹಾ ಪಂಚಾಮೃತಾಭಿಷೇಕ ವಿವಿಧ ಪೂಜಾ ವಿಧಾನಗಳು ನೆರವೇರಿಸಿದರು. ಸಕಲ ಸದ್ಭಕ್ತರೊಂದಿಗೆ ರಾಯರ ಅಷ್ಟೋತ್ತರ ಪಠಿಸಿದರು. ನಂತರ ವೃಂದಾವನಕ್ಕೆ ನಾನಾ ಪುಷ್ಪ ಹಾಗೂ ತುಳಸಿಯೊಂದಿಗೆ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿದರೆ, ಮಹಿಳೆಯರು ದಾಸರ ಗೀತೆಯೊಂದಿಗೆ ಗುರುರಾಯರ ನಾಮಸ್ಮರಣೆ ಮಾಡಿದರು.
ಗುರು ಜಗನ್ನಾಥ ದಾಸರ ಸೇವಾ ಸಮಿತಿ ಹಾಗೂ ಗುರು ರಾಘವೇಂದ್ರ ಪಾದಯಾತ್ರ ಸೇವಾ ಸಮಿತಿ ವತಿಯಿಂದ ದಾಸರ ಗೀತೆಯೊಂದಿಗೆ ಗುರುರಾಯರ ನಾಮಸ್ಮರಣೆ ಮಾಡುವ ಮೂಲಕ ಪಾಲಕಿ ಸೇವೆ ವೈಭವದಿಂದ ನಡೆಯಿತು. ಈ ವೇಳೆ ಭೀಷ್ಮಸಾ ಬಾಕಳೆ ಮಾತನಾಡಿ, ದಾಸ ಸಾಹಿತ್ಯ ಭಜನೆ ಭಾರತದ ಒಂದು ವೈವಿಧ್ಯತೆ.
ಕರ್ನಾಟಕ ಎಲ್ಲ ಗ್ರಾಮದಲ್ಲೂ ಭಜನೆಯ ಪ್ರಭಾವ ಇದೆ. ಈ ಹಿನ್ನೆಲೆಯಲ್ಲಿ ಭಜನೆಯ ನಾದ ಮಾಧುರ್ಯ ಕೇಳಿದರೆ ಕಿವಿಗಳಿಗೆ ಹಬ್ಬ. ಭಜನೆ ಕೇಳುವುದರಿಂದ, ಹಾಡುವದರಿಂದ ಮನಸ್ಸಿಗೆ ಆನಂದ ಸಿಗುತ್ತದೆ. ನಮ್ಮ ಜೀವನದಲ್ಲಿ ಎಲ್ಲ ರೀತಿಯ ಜಂಜಾಟಗಳಿಂದ ದೂರವಿರಲು ಸಾಧ್ಯವಾಗುತ್ತದೆ ಎಂದರು.
ಸಕಲ ಸದ್ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗಿಯಾಗಿ ತೀರ್ಥ-ಪ್ರಸಾದ ಸ್ವೀಕರಿಸಿ ರಾಯರ
ಅನುಗ್ರಹಕ್ಕೆ ಪಾತ್ರರಾದರು.



