ಬಳ್ಳಾರಿ:- ಮಾಜಿ ಸಚಿವ ನಾಗೇಂದ್ರ ಅವರು ಇಂದು ಜಿಲ್ಲೆಯಲ್ಲಿ ನಡೆದ ವಾಲ್ಮೀಕಿ ಕಾರ್ಯಕ್ರಮದಲ್ಲಿ ಬಹಳ ಭಾವುಕರಾಗಿ ಮಾತನಾಡಿದ್ದಾರೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಕಣ್ಣೀರು ಹಾಕುತ್ತಾ ಮಾತನಾಡಿದ ನಾಗೇಂದ್ರ ಅವರು, ನಾನು ತಪ್ಪೇ ಮಾಡಿಲ್ಲ, ಇದೆಲ್ಲ ಸುಳ್ಳು ಆರೋಪ. ಸಣ್ಣ ದೋಷ ಇಲ್ಲದೇ ಇದರಿಂದ ಹೊರ ಬರುತ್ತೇನೆ. ಪರಪ್ಪನ ಅಗ್ರಹಾರ ಜೈಲಿನ ಗೋಡೆ ಮೇಲೆ ಬಿಜೆಪಿ ನಾಯಕರ ಹೆಸರು ಬರೆದು ಬಂದಿರುವೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ಆಗಿದೆ, ನಾನು ಅಕ್ರಮ ಮಾಡಿದ್ದೇನೆ ಎಂದು ನಂಬಿದ್ದಾರೆ. ನಾನು ಯಾರನ್ನೂ ನಂಬಿಸಬೇಕಿಲ್ಲ, ಈ ಸುಳ್ಳಿನ ಪ್ರಪಂಚದಲ್ಲಿ ಕೆಟ್ಟ ಕೆಲಸಕ್ಕೆ ಕೈ ಹಾಕಲು ಮುಂದಾಗಿದ್ದಾರೆ. ನಾನು ಹಲವಾರು ಬಾರಿ ಜೈಲು ನೋಡಿದ್ದೇನೆ. ಇಂತಹ ಜೈಲಿಗೆ ಯಾವುದಕ್ಕೂ ನಾನು ಹೆದರಲಿಲ್ಲ. ಆದ್ರೆ ಒಂದು ಸುಳ್ಳು ಇಟ್ಟುಕೊಂಡು ಬಂದು ಇವರು ನನ್ನ ಮೇಲೆ ಗೂಬೆ ಕೂರಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀವೆಲ್ಲಾ ನೋಡುತ್ತಿರಿ, ಹಗರಣ ಎಂದು ಬಿಜೆಪಿಯಲ್ಲಿ ಯಾರೆಲ್ಲಾ ಮಾತಾಡುತ್ತಿದ್ದಾರೆ ಅವರೆಲ್ಲರ ಹೆಸರನ್ನು ಜೈಲಿನ ಗೋಡೆಮೇಲೆ ಬರೆದು ಬಂದಿದ್ದೇನೆ. ಅವರೆಲ್ಲ ಜೈಲುಪಾಲಾಗುತ್ತಾರೆ ಎಂದು ಹೇಳಿದರು.
ವಾಲ್ಮೀಕಿ ಸಮುದಾಯದ ಹುಡುಗನಾಗಿ ವಾಲ್ಮೀಕಿ ಜಯಂತಿ ದಿನ ವಾಲ್ಮೀಕಿ ಹಗರಣ ಎನ್ನುವ ಶಬ್ದ ಬಳಸಿ ಮಾತನಾಡುವುದಕ್ಕೆ ಬೇಸರ ಆಗುತ್ತಿದೆ. ನಾವು ಯಾವುದೇ ಹಗರಣ ಮಾಡಿಲ್ಲ. ಇದೆಲ್ಲ ಬಿಜೆಪಿಯ ಕುತಂತ್ರವಾಗಿದೆ. ಸಿಬಿಐ, ಇಡಿ ಬಳಸಿ ಸರ್ಕಾರ ಅಸ್ಥಿರ ಮಾಡುವ ಪ್ರಯತ್ನದಿಂದ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಈ ಪ್ರಕರಣದಿಂದ ಸಂಪೂರ್ಣ ಮುಕ್ತನಾಗುತ್ತೇನೆ ಎಂದರು.