ಗದಗ: ಡಿಕೆ ಶಿವಕುಮಾರ್ʼನ ಮುಖ್ಯಮಂತ್ರಿ ಮಾಡಿ ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿ ತೋರಿಸುತ್ತೇನೆ ಎಂದು ನೊಣವಿನಕೆರೆ ಸ್ವಾಮೀಜಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರದಲ್ಲಿ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 42ನೇ ವರ್ಷದ ಪುಣ್ಯಸ್ಮರಣೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೊಣವಿನಕೆರೆ ಶ್ರೀ ಕರಿವೃಷಭ ರಾಜ ದೇಶೀಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಭಾಷಣ ಮಾಡಿದ್ದಾರೆ.
ಈ ವೇಳೆ ಲಕ್ಷ್ಮೇಶ್ವರದ ಮುಕ್ತಿ ಮಂದಿರದಲ್ಲಿ ತ್ರಿಕೋಟಿ ಲಿಂಗ ಸ್ಥಾಪನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಎಲ್ಲಾ ಕಾರಣ ದುಡ್ಡೆ ದೊಡ್ಡಪ್ಪ. ಲಿಂಗ ಸ್ಥಾಪನೆಗೆ ಸುಮಾರು 15 ಕೋಟಿ ರೂ. ಆದ್ರು ಹಣ ಬೇಕು ಎಂದರು. ರಾಜಕೀಯ ಮುತ್ಸದ್ಧಿ, ಶ್ರೀಮಠ ಮಗನಾದ ಗಂಗಾಧರ ಶಿವಾಚಾರ್ಯರ ಆಶಿರ್ವಾದ ಪಡೆದ ಡಿಸಿಎಂ ಡಿಕೆಶಿ ಗಮನಕ್ಕೆ ತ್ರಿಕೋಟಿ ಲಿಂಗ ಸ್ಥಾಪನೆ ಬಗ್ಗೆ ಹೇಳಲಾಗಿದೆ. ವೀರಗಂಗಾಧರ ಜಗದ್ಗುರುಗಳ ಮೇಲೆ ಡಿಕೆಶಿ ಅಪಾರವಾದ ಭಕ್ತಿ ನಂಬಿಕೆ ಹೊಂದಿದ್ದಾರೆ. ಲಿಂಗ ಸ್ಥಾಪನೆಗೆ ಬೇಕಾಗುವ ಕೋಟ್ಯಂತರ ರೂಪಾಯಿ ಅನುದಾನ ಕಲ್ಪಿಸುವುದಾಗಿ ಹೇಳಿದ್ದರು.
ಕಾರಣಾಂತರಗಳಿಂದ ಕೊಂಚ ತಡವಾಗಿದೆ. ಈಗ ಮೊದಲ ಹಂತದಲ್ಲಿ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದಾರೆ. ಆದಷ್ಟು ಬೇಗ ಜಗದ್ಗುರುಗಳ ಸಂಕಲ್ಪ ಪೂರ್ಣಗೊಳಿಸೋಣ ಎಂದು ಹೇಳಿದ್ದಾರೆ. ಹೀಗಾಗಿ ಡಿಕೆಶಿ ಅವರು ಸಿಎಂ ಮಾಡಿ ಈ ಮುಕ್ತಿಮಂದಿರ ಜಾಗಕ್ಕೆ ಕರೆದುಕೊಂಡು ಬಂದು ತ್ರಿಕೋಟಿ ಲಿಂಗ ಸ್ಥಾಪನೆ ಮಾಡಿದರು ಎಂದು ನಾಡಿಗೆ ತೋರಿಸೋಣ ಎಂದು ಹೇಳಿದರು.



