HomeGadag Newsಹಳ್ಳದ ನೀರಿನ ಹರಿವು ಬದಲಿಸಿ ಪ್ರತ್ಯೇಕ ಸೇತುವೆ ಸೃಷ್ಟಿಸಿದ ವಿಂಡ್ ಫ್ಯಾನ್ ಕಂಪನಿಗಳು: ರೈತರ ಆಕ್ರೋಶ

ಹಳ್ಳದ ನೀರಿನ ಹರಿವು ಬದಲಿಸಿ ಪ್ರತ್ಯೇಕ ಸೇತುವೆ ಸೃಷ್ಟಿಸಿದ ವಿಂಡ್ ಫ್ಯಾನ್ ಕಂಪನಿಗಳು: ರೈತರ ಆಕ್ರೋಶ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : `ಊರಿಗೇ ಒಂದು ದಾರಿಯಾದರೆ, ಪೋರನಿಗೇ ಒಂದು ದಾರಿ’ ಎಂಬ ಮಾತೊಂದಿದೆ. ಜಿಲ್ಲೆಯ ರೋಣ ತಾಲೂಕು ಜಕ್ಕಲಿ ಗ್ರಾಮದಲ್ಲಿ ವಿಂಡ್ ಫ್ಯಾನ್ ಕಂಪನಿಗಳು ತಮ್ಮ ಭಾರೀ ವಾಹನಗಳ ಸಂಚಾರಕ್ಕೆಂದು ಹೀಗೆ ಪ್ರತ್ಯೇಕ ಮಾರ್ಗವನ್ನೇ ನಿರ್ಮಿಸಿಕೊಂಡು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದರೆ, ಅತ್ತ ಹಳ್ಳದ ನೀರು ಹರಿಯುವ ಮಾರ್ಗವೇ ಬದಲಾಗಿ, ರೈತರ ಜಮೀನುಗಳಿಗೆ ಅಪಾರ ನೀರು ನುಗ್ಗಿ ಇನ್ನಿಲ್ಲದ ಅವಾಂತರ, ಹಾನಿ ಸೃಷ್ಟಿಸಿದೆ.

ರೋಣದಿಂದ ಜಕ್ಕಲಿ ಗ್ರಾಮದ ರಸ್ತೆ ಮಧ್ಯೆ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ವಿಂಡ್ ಫ್ಯಾನ್ ಕಂಪನಿಗಳು ತಮ್ಮ ಭಾರೀ ವಾಹನಗಳ ಓಡಾಟಕ್ಕೆಂದು ಪ್ರತ್ಯೇಕ ರಸ್ತೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಹಳ್ಳದ ನೀರಿನ ಹರಿವು ಕಡಿಮೆಯಾಗಿದ್ದಷ್ಟೇ ಅಲ್ಲದೆ, ನೈಸರ್ಗಿಕವಾಗಿ ತನ್ನಷ್ಟಕ್ಕೆ ತಾನು ಹರಿಯುತ್ತಿದ್ದ ಹಳ್ಳ ಈಚೆಗೆ ಸುರಿದ ಭಾರೀ ಮಳೆಯಿಂದ ಉಕ್ಕಿ ಹರಿದು, ಮಾರ್ಗ ಬದಲಾಯಿಸಿ ಅಕ್ಕಪಕ್ಕದ ಜಮೀನುಗಳಿಗೆ ನುಗ್ಗಿದೆ. ಮಾತ್ರವಲ್ಲದೆ, ಲಕ್ಷಾಂತರ ರೂ. ಬೆಳೆಹಾನಿಗೂ ಕಾರಣವಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

Disruption created by a separate bridge

ಈ ಬಗ್ಗೆ ಸಿಟ್ಟಾದ ರೈತರು, ಗ್ರಾಮಸ್ಥರು ವಿಂಡ್ ಫ್ಯಾನ್ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರವಷ್ಟೇ ಎಚ್ಚೆತ್ತ ಕಂಪನಿಗಳ ಅಧಿಕಾರಿಗಳು, ನೀರು ಸರಾಗವಾಗಿ ಹರಿಯುವಂತೆ ಹಳ್ಳಕ್ಕೆ ಪೈಪ್‌ಗಳನ್ನು ಅಳವಡಿಸಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ವಿಂಡ್ ಫ್ಯಾನ್ ಕಂಪನಿಗಳು ನೈಸರ್ಗಿಕವಾಗಿದ್ದ ನೀರಿನ ಹರಿವಿನ ಮಾರ್ಗವನ್ನೇ ಬದಲಾಯಿಸಿ ಪೈಪ್‌ಲೈನ್ ಹಾಕಿ ತಾತ್ಕಾಲಿಕ ಸೇತುವೆ ಮಾಡಿಕೊಳ್ಳುತ್ತಿದ್ದಾರೆ. ಸರಕಾರಿ ರಸ್ತೆಗೆ ಸಮಾನಾಂತರವಾಗಿ ರಸ್ತೆ ಪಕ್ಕದಲ್ಲಿಯೇ ಮತ್ತೊಂದು ರಸ್ತೆ ಮಾಡಿಕೊಂಡಿರುವುದು ಇನ್ನಷ್ಟು ಅವಾಂತರಕ್ಕೆ ಅವಕಾಶ ಮಾಡಿಕೊಡುವಂತಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಈ ಕಂಪನಿಗಳ ವಿರುದ್ಧ ಕ್ರಮ ಕೈಗೊಂಡು, ಸೇತುವೆ ನಿರ್ಮಾಣಕ್ಕೆ ತಡೆ ಒಡ್ಡಬೇಕು ಎಂದು ಜಕ್ಕಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರೋಣ-ಜಕ್ಕಲಿ ರಸ್ತೆ ಮಧ್ಯೆ ಹರಿಯುವ ಹಳ್ಳಕ್ಕೆ ಶಾಶ್ವತವಾದ ಸೇತುವೆ ನಿರ್ಮಾಣ ಮಾಡಿದರೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ. ಸೇತುವೆ ನಿರ್ಮಾಣವಾದರೆ ಗ್ರಾಮಸ್ಥರಿಗೂ ಅನುಕೂಲ, ವಿಂಡ್ ಫ್ಯಾನ್ ಕಂಪನಿಗಳಿಗೂ ಅನುಕೂಲ. ಜನಪ್ರತಿನಿಧಿಗಳು, ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಜಕ್ಕಲಿ ಗ್ರಾಮಸ್ಥರಾದ ಶೇಖರಪ್ಪ ಮೇಟಿ, ಮಲ್ಲಪ್ಪ ಪಲ್ಲೇದ, ಶೇಖಪ್ಪ ಮಸಲವಾಡ, ಮುತ್ತಪ್ಪ ಸಿರಗುಂಪಿ, ವೀರೇಶ ಹಿರೇಮಠ, ಫಕೀರಗೌಡ್ರ ರಂಗಣ್ಣವರ, ಮುತ್ತಪ್ಪ ಶ್ಯಾಶೆಟ್ಟಿ, ರಾಜಶೇಖರ ಮೇಟಿ, ವೀರಪ್ಪ ಮೆಣಸಗಿ, ಶಿವಲಿಂಗಪ್ಪ ಗಾಣಿಗೇರ, ಮಹಾದೇವಪ್ಪ ಬಡಿಗೇರ, ಮುತ್ತು ಬಳಗೇರಿ ಮುಂತಾದವರು ಒತ್ತಾಯಿಸಿದ್ದಾರೆ.

ಸೇತುವೆ ಅಧಿಕೃತವಲ್ಲ

ವಿಂಡ್ ಫ್ಯಾನ್ ಕಂಪನಿಗಳು ಅನಧಿಕೃತವಾಗಿ ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಲೋಕೋಪಯೋಗಿ ಇಲಾಖೆ, ಗ್ರಾಮ ಪಂಚಾಯಿತಿಯ ಒಪ್ಪಿಗೆ ಪಡೆಯದೇ ತಮಗೆ ಮನಬಂದಂತೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ನಮ್ಮ ಮೇಲೆಯೇ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಜಕ್ಕಲಿ ರೈತರು ದೂರಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!