ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ಗೆ ಆರೋಗ್ಯ ಚಿಕಿತ್ಸೆಗೆಂದು ಮಾನ್ಯ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಎರಡು ದಿನದ ಹಿಂದೆ ಬಳ್ಳಾರಿ ಜೈಲಿನಿಂದ ಮನೆಗೆ ಮರಳಿರುವ ದರ್ಶನ್ ಇನ್ನೂ ಆಸ್ಪತ್ರೆ ಕಡೆ ಮುಖ ಹಾಕಿಲ್ಲ. ಅಲ್ಲದೆ ಒಂದು ವಾರದಲ್ಲಿ ದರ್ಶನ್ರ ಚಿಕಿತ್ಸೆಯ ಮಾಹಿತಿಯನ್ನು ನೀಡಬೇಕೆಂದು ನ್ಯಾಯಾಲಯ ಹೇಳಿದೆ, ಹೀಗಿದ್ದರೂ ಸಹ ದರ್ಶನ್ ಆಸ್ಪತ್ರೆಗೆ ಹೋಗದೇ ಇರುವುದು ಆಶ್ಚರ್ಯ ತರಿಸಿತ್ತು. ಆದರೆ ಇಂದು ದರ್ಶನ್ ಆಸ್ಪತ್ರೆಗೆ ಹೋಗಿದ್ದಾರೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಪೊಲೀಸ್ ಭದ್ರತೆಯೊಂದಿಗೆ ಮನೆಯಿಂದ ಹೊರಟಿದ್ದ ದರ್ಶನ್ 3 ಗಂಟೆ ವೇಳೆಗೆ ಆಸ್ಪತ್ರೆ ತಲುಪಿದರು. ಈ ವೇಳೆ ಪತ್ನಿ ವಿಜಯಲಕ್ಷ್ಮಿ ಕೂಡ ಜೊತೆಯಲ್ಲಿದ್ದರು. ಆಸ್ಪತ್ರೆ ಆವರಣಕ್ಕೆ ಬಂದ ಬಳಿಕ ಕುಂಟುತ್ತಲೇ ನಟ ಧನ್ವೀರ್ ಕೈ ಹಿಡಿದು ಒಳಗೆ ತೆರಳಿದರು. ಈ ವೇಳೆ ದರ್ಶನ್ ಭೇಟಿಗಾಗಿ ನಟಿ ಅಮೂಲ್ಯ, ಪತ್ನಿ ಜಗದೀಶ್ ಸಹ ಧಾವಿಸಿದ್ದರು.
ಸದ್ಯ ತಜ್ಞವೈದ್ಯರು ಪ್ರಾಥಮಿಕ ಕಾರ್ಯ ಶುರು ಮಾಡಿದ್ದು, ರೋಗಿಯ ಹೆಸರು ವಿವರ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮೊದಲು ಬೆನ್ನುನೋವಿಗೆ ಸಂಬಂಧಿಸಿದಂತೆ ಸ್ಕ್ಯಾನಿಂಗ್ ಮಾಡಲಿರುವ ವೈದ್ಯರು, ಬಳಿಕ ಮುಂದಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಿದ್ದಾರೆ. ಹಿರಿಯ ತಜ್ಞ ವೈದ್ಯ ಡಾ. ನವೀನ್ ಚಿಕಿತ್ಸೆ ನೀಡಲಿದ್ದಾರೆ. ಇಂದು ದರ್ಶನ್ ಬೆನ್ನುನೋವಿಗೆ ಸಂಬಂಧಿಸಿದ ಪರೀಕ್ಷೆಗಳನ್ನು ಮುಗಿಸಿದ ನಂತರ ನಟ ಮನೆಗೆ ಮರಳಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ.