ನವದೆಹಲಿ: ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತಮ್ಮ ಏಕವ್ಯಕ್ತಿ ಪ್ರದರ್ಶನದಿಂದ ತೆಗೆದುಹಾಕುವಂತೆ ಸೂಚಿಸಲಾಗಿದೆ ಎಂದು ಆರೋಪಿಸಿರುವ ಪುತ್ರ ರೈಹಾನ್ ವಾದ್ರಾ ಬೆಂಬಲಕ್ಕೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಿಂತಿದ್ದಾರೆ. ಮಗನ ಕಲಾತ್ಮಕ ಅಭಿವ್ಯಕ್ತಿಗೆ ಬೆಂಬಲ ವ್ಯಕ್ತಪಡಿಸಿರುವ ಅವರು, ಸತ್ಯದ ಪರವಾಗಿ ನಿಲ್ಲುವಂತೆ ಸಲಹೆ ನೀಡುವುದರ ಜೊತೆಗೆ ಅಧಿಕಾರದಲ್ಲಿರುವವರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ತಮ್ಮ ಪುತ್ರ ರೈಹಾನ್ ವಾದ್ರಾ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಯಾವುದೇ ಒತ್ತಡಕ್ಕೂ ಮಣಿಯದೆ ಸತ್ಯದ ಪರವಾಗಿ ನಿಲ್ಲುವಂತೆ ಮಗನಿಗೆ ಧೈರ್ಯ ತುಂಬಿದ್ದಾರೆ.
‘ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ. ಯಾವಾಗಲೂ ಹೆಮ್ಮೆಪಡುತ್ತೇನೆ. ನೀನು ಸತ್ಯದ ಪರವಾಗಿ ನಿಲ್ಲು. ಆಗ ಸುಂದರವಾದ ಎಲ್ಲವೂ ನಿನ್ನನ್ನು ಹುಡುಕಿಕೊಂಡು ಬರುತ್ತದೆ’ ಎಂದು ಪ್ರಿಯಾಂಕಾ ಗಾಂಧಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದೇ ವೇಳೆ ಅಧಿಕಾರದಲ್ಲಿರುವ ವ್ಯಕ್ತಿಗಳು ಇತರರ ಅಭಿವ್ಯಕ್ತಿಗೆ ಹೆದರುವುದನ್ನು ಟೀಕಿಸಿರುವ ಅವರು, ‘ಅಧಿಕಾರದಲ್ಲಿರುವ ವ್ಯಕ್ತಿಯೊಬ್ಬರು ಮತ್ತೊಬ್ಬರ ಅಭಿವ್ಯಕ್ತಿಗೆ ಹೆದರಿದಾಗ, ತಾವು ರಕ್ಷಿಸಲು ಪ್ರಯತ್ನಿಸುತ್ತಿರುವ ಅಧಿಕಾರವನ್ನು ಈಗಾಗಲೇ ಕಳೆದುಕೊಂಡಿದ್ದಾರೆ ಎಂಬುದು ಅವರಿಗೆ ತಿಳಿದಿರುವುದಿಲ್ಲ’ ಎಂದು ಹೇಳಿದ್ದಾರೆ.
ಈ ಸಂದೇಶದೊಂದಿಗೆ ಹೃದಯದ ಎಮೋಜಿಯನ್ನೂ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, ಮಗನ ಕಲಾತ್ಮಕ ಸ್ವಾತಂತ್ರ್ಯಕ್ಕೆ ತಮ್ಮ ಬೆಂಬಲವಿದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರ ಪುತ್ರ ರೈಹಾನ್ ವಾದ್ರಾ ಛಾಯಾಗ್ರಾಹಕ ಹಾಗೂ ಕಲಾವಿದರಾಗಿದ್ದು, ದೆಹಲಿಯ ಬಿಕಾನೇರ್ ಹೌಸ್‌ನಲ್ಲಿ ‘ನೋ ಐಡಿಯಾ ಇಸ್ ಫೈನಲ್’ (No Idea is Final) ಎಂಬ ಶೀರ್ಷಿಕೆಯಡಿ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದಾರೆ. ಬುಧವಾರ (ಅಕ್ಟೋಬರ್ 21) ಪ್ರದರ್ಶನದ ಪೂರ್ವವೀಕ್ಷಣೆ ನಡೆದಿದ್ದು, ಗುರುವಾರದಿಂದ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗಿದೆ.
ಆದರೆ ಪ್ರದರ್ಶನ ಆರಂಭವಾಗುವ ಮುನ್ನವೇ ವಿವಾದವೊಂದು ಎದುರಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳನ್ನು ಪ್ರದರ್ಶನದಿಂದ ತೆಗೆದುಹಾಕುವಂತೆ ಬಿಕಾನೇರ್ ಹೌಸ್ ಆಡಳಿತ ಮಂಡಳಿ ಸೂಚಿಸಿದೆ ಎಂದು ರೈಹಾನ್ ವಾದ್ರಾ ಆರೋಪಿಸಿದ್ದಾರೆ.
ರೈಹಾನ್ ಅವರ ಹೇಳಿಕೆಯ ಪ್ರಕಾರ, ಬುಧವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಕೆಲವು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಲಾಗಿತ್ತು. ಸಂಜೆ 5 ಗಂಟೆಯೊಳಗೆ ಚಿತ್ರಗಳನ್ನು ತೆಗೆದುಹಾಕದಿದ್ದರೆ ಸಂಪೂರ್ಣ ಪ್ರದರ್ಶನವನ್ನೇ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.
ಪ್ರದರ್ಶನಕ್ಕೆ ಸಂಬಂಧಿಸಿದ ವಿವರವಾದ ಪ್ರಸ್ತಾವನೆ ಹಾಗೂ ವಿನ್ಯಾಸವನ್ನು ಮೊದಲೇ ಬಿಕಾನೇರ್ ಹೌಸ್ ಆಡಳಿತಕ್ಕೆ ಸಲ್ಲಿಸಲಾಗಿತ್ತು. ಆದರೂ ಕೊನೆಯ ಕ್ಷಣದಲ್ಲಿ ಕೆಲವು ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಿರುವುದು ಸರಿಯಲ್ಲ ಎಂದು ರೈಹಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ತಮ್ಮ ಛಾಯಾಚಿತ್ರಗಳು ಯಾವುದೇ ರಾಜಕೀಯ ಸಂದೇಶವನ್ನು ಸಾರುವ ಉದ್ದೇಶ ಹೊಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಆರು ತಿಂಗಳ ಅವಧಿಯಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಸಾರ್ವಜನಿಕ ಘಟನೆಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುವ ಪ್ರಯತ್ನವಷ್ಟೇ ಇದಾಗಿತ್ತು ಎಂದು ತಿಳಿಸಿದ್ದಾರೆ.
‘ನಾನು ಭಾರತೀಯ ಕಲಾವಿದನಾಗಿ ನನ್ನ ಸುತ್ತಮುತ್ತ ನಡೆಯುತ್ತಿರುವ ಘಟನೆಗಳನ್ನು ದಾಖಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ. ಆದರೆ ಇಂತಹ ಚಿತ್ರಗಳನ್ನು ಪ್ರದರ್ಶಿಸಲು ಇದು ಸೂಕ್ತ ಸಮಯವಲ್ಲ ಎಂದು ನನಗೆ ತಿಳಿಸಲಾಯಿತು’ ಎಂದು ರೈಹಾನ್ ಹೇಳಿದ್ದಾರೆ.
ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಅವರು, ತಮ್ಮ ಛಾಯಾಚಿತ್ರಗಳನ್ನು ತೆಗೆದುಹಾಕುವಂತೆ ಸೂಚಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾರತದ ರಾಷ್ಟ್ರಧ್ವಜ ಇರುವ ಛಾಯಾಚಿತ್ರವನ್ನೂ ತೆಗೆದುಹಾಕುವಂತೆ ಸೂಚಿಸಲಾಗಿತ್ತು ಎಂದು ಆರೋಪಿಸಿದ್ದಾರೆ.










