HomeGadag Newsಬಡವರಿಗೆ ಉಚಿತ ಕಾನೂನು ನೆರವು : ಬಸವರಾಜ

ಬಡವರಿಗೆ ಉಚಿತ ಕಾನೂನು ನೆರವು : ಬಸವರಾಜ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಜನರಲ್ಲಿ ಕಾನೂನು ಅರಿವು ಮೂಡಿಸುವುದರ ಜೊತೆಗೆ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ಕಾನೂನು ನೆರವನ್ನು ನೀಡುತ್ತಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ನುಡಿದರು.

ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಕೆ.ಎಲ್.ಇ ಸಂಸ್ಥೆಯ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂವಿಧಾನದಲ್ಲಿ ಅಶಕ್ತರು, ದುರ್ಬಲರು ಸೇರಿದಂತೆ ಎಲ್ಲರಿಗೂ ಕಾನೂನು ಸೇವೆ ದೊರೆಯಬೇಕು ಎಂಬ ಆಶಯ ಇದೆ. ಆ ಆಶಯವನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ನೆರವೇರಿಸುತ್ತಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ ಮಾತನಾಡಿ, 1995ನೇ ನ. 9ರಂದು ದೇಶದಲ್ಲಿ ಲೀಗಲ್ ಸರ್ವೀಸ್ ಆ್ಯಕ್ಟ್ ಜಾರಿಗೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ನ. 9ರಂದು ದೇಶಾದ್ಯಂತ ಕಾನೂನು ಸೇವೆಗಳ ದಿನಾಚರಣೆ ಆಚರಿಸಲಾಗುತ್ತದೆ.

ಕಾನೂನು ಸೇವೆಗಳ ಪ್ರಾಧಿಕಾರದ ವ್ಯಾಪ್ತಿ ಬಹಳ ವಿಶಾಲವಾಗಿದ್ದು, ಇದು ಜನರಲ್ಲಿ ನಿರಂತರವಾಗಿ ಲೀಗಲ್ ಏಡ್ ಕ್ಲಿನಿಕ್‌ಗಳ ಮೂಲಕ ಉಚಿತವಾಗಿ ಕಾನುನು ಸಲಹೆಗಳನ್ನು ನೀಡುತ್ತಾ ಬಂದಿದೆ. ಪ್ರಾಧಿಕಾರದಲ್ಲಿ ಪ್ಯಾನಲ್ ವಕೀಲರು, ಹಾಗೂ ಕಾನೂನು ನೆರವು ಅಭಿರಕ್ಷಕರನ್ನು ನೇಮಿಸಿಕೊಂಡು ಬಡವರಿಗೆ, ಮಹಿಳೆಯರಿಗೆ ಉಚಿತವಾಗಿ ಕಾನೂನು ನೆರವು ನೀಡುತ್ತಿದೆ ಎಂದು ಪ್ರಾಧಿಕಾರದ ಬಗ್ಗೆ ವಿವರಿಸಿದರು.

ಯಾವುದೇ ವ್ಯಾಜ್ಯ ನ್ಯಾಯಾಲಯದ ಎದುರು ಬಂದಾಗ ವಾದ-ವಿವಾದಗಳನ್ನು ಆಲಿಸಿ ತೀರ್ಪು ನೀಡಲಾಗುತ್ತದೆ. ತೀರ್ಪು ಬರಲು ಹೆಚ್ಚಿನ ಸಮಯ ಬೇಕಾಗುತ್ತದೆಯಾದರೂ ಪ್ರಕರಣದಲ್ಲಿ ಕೊನೆಗೆ ಒಬ್ಬರ ಗೆಲುವು, ಇನ್ನೊಬ್ಬರ ಸೋಲಾಗುತ್ತದೆ. ಆದರೆ ಎರಡೂ ಕಕ್ಷಿದಾರರ ಒಪ್ಪಿಗೆಯಿಂದ ಲೋಕ್ ಅದಾಲತ್‌ನಲ್ಲಿ ರಾಜೀ ಸಂಧಾನಕ್ಕೆ ಮುಂದಾಗಿ ಪ್ರಕರಣ ಬಗೆಹರಿಸಿಕೊಂಡರೆ ಇಬ್ಬರೂ ಗೆಲ್ಲುತ್ತಾರೆ. ಜತೆಗೆ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗುತ್ತದೆ, ಸಾಕಷ್ಟು ಸಮಯ ಉಳಿಯುತ್ತದೆ ಎಂದರು.

ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಮಾತನಾಡಿ, ಬಡವರು, ನಿರ್ಗತಿಕರು, ಮಹಿಳೆಯರು ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಲಾಗಿದೆ. ಈ ಮೂಲಕ ಕಾನೂನು ಅರಿವು ಹಾಗೂ ನೆರವನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.

ಪ್ರಾ. ಜೈಹನುಮಾನ ಎಚ್.ಕೆ. ಮಾತನಾಡಿ, ಸಮಾಜದ ದುರ್ಬಲರು ನ್ಯಾಯದಿಂದ ವಂಚಿತರಾಗಬಾರದು. ಇದರಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಪ್ರಮುಖವಾಗಿದೆ. ವಿದ್ಯಾರ್ಥಿ ಹಂತದಿಂದಲೇ ದುರ್ಬಲರಿಗಾಗಿ ಸಹಾನುಭೂತಿ ಹೊಂದುವ ಮೂಲಕ ಅವರಿಗೆ ನ್ಯಾಯ ದೊರಕಿಸಲು ಮುಂದಾಗಿ, ತಮ್ಮ ವ್ಯಕ್ತಿತ್ವ ವಿಕಸನಗೊಳಿಸಬೇಕು ಎಂದರು.

ಶರತಕುಮಾರ ಪ್ರಾರ್ಥಿಸಿದರು. ಅಧ್ಯಾಪಕರಾದ ಜ್ಯೋತಿ ಸಿ.ವಿ. ಸ್ವಾಗತಿಸಿದರು. ಪ್ರೊ. ವಿ.ವಿ. ಮುರದಂಡೆ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಕಾನೂನು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಮುಖ್ಯ ಕಾನೂನು ನೆರವು ಅಭಿರಕ್ಷಕರಾದ ಎಸ್.ವಿ. ಗ್ರಾಮಪುರೋಹಿತ ಮಾತನಾಡಿ, ನಮ್ಮ ಸಂವಿಧಾನದಲ್ಲಿ ಸರ್ವರಿಗೂ ನ್ಯಾಯ ದೊರಕಬೇಕು ಎಂಬ ಆಶಯ ಇದೆ. ಅದು ನಮ್ಮ ಮೂಲಭೂತ ಹಕ್ಕು ಕೂಡ ಆಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಸೇವೆಗಳ ಕಾಯ್ದೆ ಜಾರಿಗೆ ಬಂದಿದೆ. ಪ್ರಾಧಿಕಾರದಿಂದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಬಡವರಿಗೆ ನೆರವನ್ನು ನೀಡುತ್ತಿದೆ. ೨೦೨೨ರಲ್ಲಿ ಎಲ್.ಎ.ಡಿ.ಸಿ ಪ್ರಾರಂಭಿಸಿ, ಅದರ ಮೂಲಕ ಸೇವೆ ನೀಡುತ್ತಿದೆ ಎಂದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!