ಮಂಡ್ಯ:- ಶೌಚಾಲಯ ಕಾಮಗಾರಿ ಬಿಲ್ ಬಿಡುಗಡೆಗೆ ಲಂಚಕ್ಕೆ ಬೇಡಿಕೆ ಇಟ್ಟ ಗ್ರಾ.ಪಂ ಸದಸ್ಯ ಲೋಕಾ ಬಲೆಗೆ ಬಿದ್ದಿರುವ ಘಟನೆ ಮಂಡ್ಯ ನಗರದ ಕೆಫೆ ಒಂದರಲ್ಲಿ ಜರುಗಿದೆ.
ತಗ್ಗಹಳ್ಳಿ ಗ್ರಾ.ಪಂ ಸದಸ್ಯ ಅನಿಲ್ ಕುಮಾರ್ ಸಿಕ್ಕಿಬಿದ್ದ ಗ್ರಾ.ಪಂ ಸದಸ್ಯ ಎನ್ನಲಾಗಿದೆ. ಕೋಲಕಾರನ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುತ್ತಿಗೆದಾರ ಚೆನ್ನ ಬಸವರಿಂದ ಐದುವರೆ ಲಕ್ಷದ ಕಾಮಗಾರಿ ನಡೆಸಲಾಗಿತ್ತು.
ಆದರೆ ಈ ಕಾಮಗಾರಿ ಹಣ ಬಿಡುಗಡೆಗೆ ಅನಿಲ್ ಕುಮಾರ್ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ದೂರಿನ ಬಳಿಕ ನಿನ್ನೆ ರಾತ್ರಿ ಕೆಫೆಯೊಂದರಲ್ಲಿ ಕಾರ್ಯಾಚರಣೆ ನಡೆದಿದ್ದು, ಹಣ ಪಡೆಯುವಾಗಲೇ ರೆಡ್ಯಾಂಡಾಗಿ ಅನಿಲ್ ಸಿಕ್ಕಿಬಿದ್ದಿದ್ದಾನೆ.
ಅಲ್ಲದೇ ಅನಿಲ್ ಲಂಚ ಪಡೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಲಂಚದ ಹಣ ಪಡೆದು ಎಣಿಸುವಾಗ ಹಣದ ಮೇಲಿದ್ದ ಪೌಡರ್ ಕಂಡು ಆರೋಪಿ ಅನಿಲ್ ಗೆ ಅನುಮಾನ ಶುರುವಾಗಿದೆ.
ಕೂಡಲೇ ಹಣ ಬಿಟ್ಟು ಕೈತೊಳೆದುಕೊಳ್ಳಲು ಓಡಿದ್ದಾನೆ. ಆಗ ತಕ್ಷಣವೇ ಆರೋಪಿ ಅನಿಲ್ ನನ್ನು ಅರೆಸ್ಟ್ ಮಾಡಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ತನಿಖೆ ಮುಂದುವರಿದಿದೆ.