ಬೆಂಗಳೂರು: ಹಣ ಮತ್ತು ಚಿನ್ನದ ಉಂಗುರದ ಆಸೆಗಾಗಿ 65 ವರ್ಷದ ವೃದ್ಧೆಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿ ಸಮೀಪದ ಕೋನಸಂದ್ರದ ದೇವಸ್ಥಾನದ ಬಳಿ ನಡೆದಿದೆ.

ಬಿಡದಿಯ ನಾರಾಯಣಮ್ಮ ಕೊಲೆಯಾದ ದುರ್ದೈವಿ.
ಕುಟುಂಬದಿಂದ ದೂರವಾಗಿದ್ದ ನಾರಾಯಣಮ್ಮ ಒಬ್ಬರೇ ಓಡಾಡುತ್ತಿದ್ದರು. ಇತ್ತೀಚೆಗೆ ಕೋನಸಂದ್ರದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಅವರನ್ನು ಆರೋಪಿ ಗಮನಿಸಿದ್ದ. ವೃದ್ಧೆಯ ಬಳಿ ಹಣ ಹಾಗೂ ಚಿನ್ನದ ಉಂಗುರ ಇರುವುದನ್ನು ತಿಳಿದುಕೊಂಡಿದ್ದ ಆರೋಪಿ, ಹಣ ದೋಚುವ ಉದ್ದೇಶದಿಂದ ಕೃತ್ಯಕ್ಕೆ ಸಂಚು ರೂಪಿಸಿದ್ದ ಎನ್ನಲಾಗಿದೆ.
ನಾಲ್ಕು ದಿನಗಳ ಹಿಂದೆ ದೇವಸ್ಥಾನದ ಬಳಿ ಕುಳಿತಿದ್ದ ನಾರಾಯಣಮ್ಮ ಅವರ ಬಳಿ ಬಂದ ಆರೋಪಿ ಹಣಕ್ಕಾಗಿ ಒತ್ತಾಯಿಸಿದ್ದಾನೆ. ಈ ವೇಳೆ ವೃದ್ಧೆಯ ಪಕ್ಕೆಲುಬಿನ ಭಾಗಕ್ಕೆ ಹೊಡೆದು, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಅವರ ಕೈಯಲ್ಲಿದ್ದ ಚಿನ್ನದ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಈ ವೇಳೆ ಸ್ಥಳೀಯರೊಬ್ಬರು ಆರೋಪಿಯನ್ನು ಗಮನಿಸಿ ಪ್ರಶ್ನಿಸಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಕೆಂಗೇರಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಆರಂಭದಲ್ಲಿ ದೇಹದ ಮೇಲೆ ಹಲ್ಲೆಯ ಗುರುತುಗಳು ಕಂಡುಬಾರದ ಹಿನ್ನೆಲೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು.
ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ನಾರಾಯಣಮ್ಮ ಅವರದ್ದು ಸಹಜ ಸಾವಲ್ಲ, ಕೊಲೆ ಎಂಬುದು ಬಹಿರಂಗವಾಗಿದೆ. ಜೊತೆಗೆ ಅವರ ಕೈಯಲ್ಲಿದ್ದ ಚಿನ್ನದ ಉಂಗುರವೂ ನಾಪತ್ತೆಯಾಗಿರುವುದು ಪೊಲೀಸರಿಗೆ ಅನುಮಾನ ಮೂಡಿಸಿತ್ತು.
ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ. ಸದ್ಯ ಸ್ಥಳೀಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.








