ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ 15 ತಿಂಗಳಿಗೂ ಹೆಚ್ಚು ಕಾಲ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಬೆನ್ನು ನೋವು ಮರುಕಳಿಸಿದ್ದು, ಫಿಸಿಯೋಥೆರಪಿ ಚಿಕಿತ್ಸೆ ಪಡೆಯಲು ನ್ಯಾಯಾಲಯ ಅನುಮತಿ ನೀಡಿದೆ.

ಆದರೆ ಹೊರಗಿನ ಆಸ್ಪತ್ರೆಗೆ ತೆರಳುವ ಬದಲು ಜೈಲಿನ ಆವರಣದಲ್ಲಿಯೇ ಚಿಕಿತ್ಸೆ ಪಡೆಯುವಂತೆ 59ನೇ ಸಿಸಿಹೆಚ್ ನ್ಯಾಯಾಲಯ ಷರತ್ತುಬದ್ಧ ಆದೇಶ ಹೊರಡಿಸಿದೆ.
ಕಳೆದ ಕೆಲವು ದಿನಗಳಿಂದ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಆದೇಶ ಪ್ರಕಟಿಸಿದೆ. ಜೈಲಿನಲ್ಲಿಯೇ ಫಿಸಿಯೋಥೆರಪಿ ಹಾಗೂ ಬೆನ್ನು ನೋವಿಗೆ ಸಂಬಂಧಿಸಿದ ಇತರೆ ಚಿಕಿತ್ಸೆಗಳ ವ್ಯವಸ್ಥೆ ಮಾಡುವಂತೆ ಜೈಲಾಧಿಕಾರಿಗಳಿಗೆ ಸೂಚನೆ ನೀಡಿದೆ.
2024ರಲ್ಲಿ ಬಂಧನವಾದ ಕೆಲ ತಿಂಗಳ ಬಳಿಕವೂ ದರ್ಶನ್ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದರು. ಆಗ ವೈದ್ಯಕೀಯ ವರದಿಯಲ್ಲಿ ಬೆನ್ನಿನ ಎಲ್4 ಮತ್ತು ಎಲ್5 ಭಾಗದಲ್ಲಿ ಸಮಸ್ಯೆ ಇರುವುದು ಉಲ್ಲೇಖವಾಗಿತ್ತು. ಸೂಕ್ತ ಚಿಕಿತ್ಸೆ ನೀಡದಿದ್ದರೆ ಕಾಲು ಬಲಹೀನಗೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದರು. ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು. ಬಳಿಕ ಅವರಿಗೆ ಜಾಮೀನು ದೊರೆತಿತ್ತು.
ಇದೀಗ ಮತ್ತೆ ಬೆನ್ನು ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಕಳೆದ 15 ತಿಂಗಳಿನಿಂದ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿರುವುದು ಹಾಗೂ ಚಳಿಗಾಲದ ಕಾರಣದಿಂದ ಬೆನ್ನು ನೋವು ಮರುಕಳಿಸಿದೆ. ಹೀಗಾಗಿ ಸೂಕ್ತ ಚಿಕಿತ್ಸೆ ಪಡೆಯಲು ಅವಕಾಶ ನೀಡಬೇಕು ಎಂದು ವಾದಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು, ಈ ಹಿಂದೆ ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದರ್ಶನ್, ಚಿಕಿತ್ಸೆ ಪಡೆಯುವ ಬದಲಿಗೆ ಕಾರ್ಯಕ್ರಮಗಳು ಹಾಗೂ ಸಿನಿಮಾ ಚಿತ್ರೀಕರಣಗಳಲ್ಲಿ ಭಾಗವಹಿಸಿದ್ದರು ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ, ದರ್ಶನ್ ಅವರಿಗೆ ಜೈಲಿನಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸಿದೆ. ಈ ಮೂಲಕ ಹೊರಗಿನ ಆಸ್ಪತ್ರೆಗೆ ತೆರಳುವ ಅವಕಾಶಕ್ಕೆ ಬದಲಾಗಿ ಜೈಲಿನಲ್ಲೇ ಚಿಕಿತ್ಸೆ ಪಡೆಯಬೇಕೆಂದು ಸ್ಪಷ್ಟಪಡಿಸಿದೆ.







