ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಆಧುನಿಕತೆ, ತಾಂತ್ರಿಕತೆಯ ಪ್ರಭಾವದಿಂದ ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯ, ಹಬ್ಬ, ಆಚರಣೆಗಳು ಮರೆಯಾಗದಿರಲಿ. ಧಾರ್ಮಿಕ ಕಾರ್ಯಾಕ್ರಮಗಳು ಮತ್ತು ಜಾತ್ರಾ ಮಹೋತ್ಸವಗಳು ಮನುಷ್ಯನನ್ನು ಸನ್ಮಾರ್ಗಕ್ಕೆ ಕೊಂಡ್ಯೊಯುವ ವೇದಿಕೆಗಳಾಗಿವೆ ಎಂದು ಶಿರಹಟ್ಟಿಯ ಜ. ಫಕ್ಕೀರೇಶ್ವರ ಸಂಸ್ಥಾನಮಠದ ಜ. ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಭಾನುವಾರ ತಾಲೂಕಿನ ಗೊಜನೂರ ಗ್ರಾಮದಲ್ಲಿ ನಡೆದ ಶ್ರೀ ಗಾಳೆಮ್ಮದೇವಿ ಜಾತ್ರಾ ಮಹೋತ್ಸವ ಮತ್ತು ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತಿದ್ದರು.
ತಂದೆ-ತಾಯಿ, ಗುರುಗಳು ದೇವರ ಸಮಾನ. ಅವರು ನಮಗೆ ಧಾರೆಯೆರೆದಿರುವ ಸಂಸ್ಕಾರ, ಪ್ರೀತಿ, ವಿಶ್ವಾಸ, ತ್ಯಾಗಕ್ಕೆ ಸಮನಾದುದು ಯಾವುದೂ ಇಲ್ಲ. ವಿಜ್ಞಾನ ಎಷ್ಟೇ ಪ್ರಗತಿ ಸಾಧಿಸಿದ್ದರೂ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಗಳನ್ನು ಮರೆಯಬಾರದು. ಆಧ್ಯಾತ್ಮವನ್ನು ಬದುಕಿಗೆ ಹೊಂದಿಸಿಕೊಳ್ಳಬೇಕು. ಸಾರ್ಥಕ ಬದುಕಿಗೆ ಪರಸ್ಪರ ಸ್ನೇಹ, ಪ್ರೀತಿ, ಸಹಾಯ ರೂಢಿಸಿಕೊಳ್ಳಬೇಕು. ಮನುಷ್ಯನ ಬದುಕು ಮೌಲ್ಯಯುತ ಮತ್ತು ಸ್ಮರಣೀಯವಾಗಿರಲು ಧರ್ಮದ ತಳಹದಿಯಲ್ಲಿ ಸಾಗಬೇಕು. ನಿತ್ಯ ಜೀವನದ ಕಾಯಕದೊಂದಿಗೆ ಪ್ರತಿಯೊಬ್ಬರೂ ಶಿಕ್ಷಣ, ಆರೋಗ್ಯ, ಪ್ರಸಾದ ಸೇರಿ ಧರ್ಮ ಕಾರ್ಯಗಳಿಗೆ ಕೈಲಾದಮಟ್ಟಿನ ಸಹಾಯ ಸಹಕಾರ ನೀಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಶರಣರು, ಸಂತರು, ಸೂಫಿಗಳು, ಮಹಾತ್ಮರು ಸಮಾಜದ ಮಾರ್ಗದರ್ಶಕರಾಗಿದ್ದು, ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಬದುಕು ಸಾರ್ಥಕತೆ ಹೊಂದುತ್ತದೆ ಎಂದು ಹೇಳಿದರು.
ಧರ್ಮಸಭೆಯ ಬಳಿಕ ಭಾರೀ ಸವಾಲ್-ಜವಾಬ್ ಭಜನಾ ಸ್ಫರ್ಧೆ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಗ್ರಾ.ಪಂ ಸರ್ವ ಸದಸ್ಯರು, ಭಕ್ತರು, ದೇವಸ್ಥಾನ ಕಮಿಟಿಯವರು ಪಾಲ್ಗೊಂಡಿದ್ದರು.