ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ದಿನ ಮಾನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಮೊರೆ ಹೋಗಿರುವುದರಿಂದ ಜ್ಞಾನದ ಕೊರತೆ ಜೊತೆಗೆ ಮಾನಸಿಕ ಮತ್ತು ದೈಹಿಕ ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚು ಉತ್ಸಾಹದಿಂದ ಅಭ್ಯಾಸಿಸಲು ಪುಸ್ತಕದ ಗೆಳೆತನ ಮಾಡುವುದು ಸೂಕ್ತವಾಗಿದೆ. ಪುಸ್ತಕ ಮಸ್ತಕದ ಜ್ಞಾನ ಭಂಡಾರವಾಗಿದೆ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಬಸವರಾಜ ಮಲ್ಲಾಪೂರ ಹೇಳಿದರು.
ನಗರದ ಹುಲಕೋಟಿ ಕೋ- ಆಪರೇಟಿವ್ ಶಿಕ್ಷಣ ಸಂಸ್ಥೆ ಸೊಸೈಟಿಯ ಎಚ್.ಸಿ.ಇ.ಎಸ್. ಬಿಸಿಎ ಕಾಲೇಜನಲ್ಲಿ ಇತ್ತೀಚಿಗೆ ಜರುಗಿದ ಸಾಂಘಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯನ ಬದುಕು ಉಜ್ವಲಗೊಳಿಸುವ ಶಕ್ತಿ ಇರುವ ಶಿಕ್ಷಣ ಅವಿಭಾಜ್ಯ ಅಂಗವಾಗಿರುವ ಗ್ರಂಥಾಲಯ ಮಹತ್ವ ಅರಿಯುವಲ್ಲಿ ಇಂದಿನ ಯುವ ಜನತೆ ಹಿಂದೆ ಬಿದ್ದಿದೆ. ಮೊಬೈಲ್, ಕಂಪ್ಯೂಟರ್, ಟಿ.ವಿ ಹಾವಳಿಯಿಂದಾಗಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಪ್ರಜ್ಞಾವಂತ ಸಮಾಜ ನಿರ್ಮಿಸುವುದರಲ್ಲಿ ಗ್ರಂಥಾಲಯಗಳ ಪಾತ್ರ ಹಿರಿದು. ಜನತೆಯಲ್ಲಿ ಓದುವ ಸಂಸ್ಕೃತಿ ಹುಟ್ಟುಹಾಕುವ ಅನಿವಾರ್ಯವಿದೆ. ಮೊಬೈಲ್ ಹಿಡಿಯುವ ಕೈಗಳು ಪುಸ್ತಕಗಳನ್ನು ಹಿಡಿಯುವಂತಾಗಬೇಕು. ಆಗ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಆದ್ದರಿಂದ ಯುವಕರು ದಾರ್ಶನಿಕರ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಓದುವುದರೊಂದಿಗೆ ಅವರ ಆದರ್ಶ, ತತ್ವ , ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಂಸ್ಥೆಯ ಆಡಳಿತ ಅಧಿಕಾರಿ ಆರ್.ಎಸ್. ಪಾಟೀಲ, ಸಂಸ್ಥೆಯ ಅಧ್ಯಕ್ಷ ಆರ್.ಎಂ. ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ವರಿ ಕಲ್ಯಾಣಿ, ಪ್ರಾಚಾರ್ಯರಾದ ಪ್ರಿಯಾಂಕ ಸಾಶ್ವಿಹಳ್ಳಿ, ಉಪನ್ಯಾಸಕಾರದ ಎಸ್.ಎಂ. ಬಿಂಗಿ, ಎಸ್.ಎಸ್. ಗುರುಬಸನಗೌಡ್ರ ಸೇರಿದಂತೆ ಇತರರಿದ್ದರು.



