ಬೆಂಗಳೂರು:- ಮಹಿಳಾ ಟೆಕ್ಕಿಗೆ ಪೊಲೀಸ್ ಕಾನ್ಸ್ಟೇಬಲ್ ಓರ್ವ ಕಿರುಕುಳ ಕೊಟ್ಟಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಪ್ಲೀಸ್ ಹಗ್ ಮಾಡು ನಾನು ಯಾರಿಗೂ ಹೇಳಲ್ಲ ಅಂತ ಮಹಿಳೆಗೆ ಹಿಂಸೆ ಕೊಟ್ಟಿದ್ದಾನೆ.
ಘಟನೆ ಸಂಬಂಧ ಕಿರಣ್ ಎಂಬ ಕಾನ್ಸ್ಟೇಬಲ್ ನನ್ನು ಕೆಲಸದಿಂದ ಸಸ್ಪೆಂಡ್ ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಆದೇಶ ಹೊರಡಿಸಿದ್ದಾರೆ.. ಯುವತಿಯೊಬ್ಬರು ಇತ್ತೀಚೆಗೆ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದೇ ನೆಪದಲ್ಲಿ ಯುವತಿಯ ಮನೆಗೆ ಬಂದ ಪೊಲೀಸ್ ಕಾನ್ಸ್ಟೇಬಲ್ ಕಿರಣ್, ಮನೆ ಒಳ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದಾನೆ.
ನಂತರ ಯುವತಿ ಬಳಿ, ‘‘ನಿಮ್ಮಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿಟ್ಟುಕೊಂಡು ನಿನ್ನ ಪಾಸ್ಪೋರ್ಟ್ ಕ್ಯಾನ್ಸಲ್ ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’’ ಎಂದು ಯುವತಿ ಬಳಿ ಪೊಲೀಸ್ ಕಾನ್ಸ್ಟೇಬಲ್ ಆಗ್ರಹಿಸಿದ್ದ ಎಂದು ದೂರಲಾಗಿದೆ. ಅಲ್ಲದೆ, ಯುವತಿ ಒಪ್ಪದಿದ್ದಾಗ ತಾನೇ ಹೋಗಿ ಬಾಗಿಲು ಮುಚ್ಚಿದ್ದಾನೆ. ಅಲ್ಲದೆ, ಯಾರಿಗೂ ಹೇಳಬೇಡ, ಒಂದೇ ಒಂದ್ ಸಲ ಹಗ್ ಮಾಡುತ್ತೇನೆ ಎಂದಿದ್ದಾಗಿ ಆರೋಪಿಸಲಾಗಿದೆ.
ಈ ಬಗ್ಗೆ ಪಶ್ಚಿಮ ವಿಭಾಗ ಡಿಸಿಪಿಗೆ ಯುವತಿ ದೂರು ನೀಡಿದ್ದರು. ನಂತರ ಡಿಸಿಪಿ ಗಿರೀಶ್ ತನಿಖೆ ನಡೆಸಿ ಪೇದೆ ಕಿರಣ್ ನನ್ನು ಅಮಾನತುಗೊಳಿಸಿದ್ದಾರೆ.