ವಿಜಯಸಾಕ್ಷಿ ಸುದ್ದಿ, ಗದಗ: ವ್ಯಕ್ತಿ ಸಮಾಜಮುಖಿಯಾಗಿ ಸೇವೆ ಮಾಡುವ ಮೂಲಕ ಸಂತೃಪ್ತ ಭಾವನೆ ಹೊಂದಬೇಕೆಂದು ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ಅವರು ಬೆಟಗೇರಿಯ ಗೌರಿಗುಡಿ ಓಣಿಯ ಗೌರಿಶಂಕರ ದೇವಸ್ಥಾನದ ಕಾರ್ತಿಕೋತ್ಸವದ ಅಂಗವಾಗಿ ಏರ್ಪಡಿಸಿದ್ದ ದೊಡ್ಡಾಟ, ಲಿಂಗಧಾರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಆಧುನಿಕತೆಯ ಇಂದಿನ ದಿನಗಳಲ್ಲಿ ಎಲ್ಲರೂ ಮೊಬೈಲ್ ಮೋಹಕ್ಕೆ ಒಳಗಾಗಿದ್ದಾರೆ. ಸಂಪರ್ಕ ಹಾಗೂ ಜ್ಞಾನಕ್ಕಾಗಿ ಮೊಬೈಲ್ ಸದ್ಬಳಕೆ ಆಗಬೇಕಷ್ಟೇ. ದೀಪೋತ್ಸವ ಮಾಡುವ ಮೂಲಕ ಅಂಧಕಾರವನ್ನು ಅಳೆದು ಜ್ಞಾನದ ಬೆಳಕವನ್ನು ವಿಸ್ತರಿಸುವ ಕಾರ್ಯ ಆಗಬೇಕು. ಎಣ್ಣೆಯಿಂದ ದೀವಿಗೆ ಬೆಳಗಲಿ. ದೀಪೋತ್ಸವಕ್ಕೆ ಎಣ್ಣೆ ಬಳಕೆ ಆಗಬೇಕು. ಇನ್ನೊಂದು ರೀತಿಯ ಎಣ್ಣೆ ಬಳಕೆ ಮಾಡಿ ಬೆಳಕಿನ ಬದುಕನ್ನು ಅಂಧಕಾರಕ್ಕೆ ದೂಡುವ ಬದಲು ಧರ್ಮ ಜ್ಯೋತಿ ಜ್ಞಾನ ಜ್ಯೋತಿಯ ದೀಪೋತ್ಸವವಾಗಲಿ ಎಂದರು.
ಹೊಸಳ್ಳಿಯ ಅಭಿನವ ಬೂದೀಶ್ವರ ಮಹಾಸ್ವಾಮಿಗಳು ಮಾತನಾಡಿ, ಹಳೇ ಜಾನಪದ ಸೊಗಡನ್ನು ಬಿಂಬಿಸುವ ದೊಡ್ಡಾಟ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅಭಿವ್ಯಕ್ತಗೊಳಿಸಿದ್ದು ಶ್ಲಾಘನೀಯ ಎಂದರಲ್ಲದೆ, ಸುಮಾರು ೧೫೦ ಮಕ್ಕಳಿಗೆ ಲಿಂಗದೀಕ್ಷೆ ಮಾಡಿದ್ದು ಸ್ವಾಗತಾರ್ಹ ಎಂದರು.
ಸದಾಶಿವ ಮದರಿಮಠ, ರಾಜು ಕುರಡಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಶಣ್ಣ ಕುಂದಗೋಳ, ಶಿವಪುತ್ರಪ್ಪ ಬೆಂತೂರ, ಚನ್ನಬಸಪ್ಪ ಅಕ್ಕಿ, ಎಂ.ಜಿ. ಸಂತೋಜಿ, ಗುರು ತಡಸದ, ಎಸ್.ಎಚ್. ಶಿವನಗೌಡ್ರ, ನಗರಸಭಾ ಸದಸ್ಯರಾದ ಮಾಧುಸಾ ಮೇರವಾಡೆ, ಶಕುಂತಲಾ ಅಕ್ಕಿ, ಸಾವಿತ್ರಿ ಗೋಡಿ, ಶಿವಾನಂದ ನಾಗರಾಳ, ಸುಭಾಸ ಮಳಗಿ, ಅಶೋಕ ಸುತಾರ, ಶರಣಪ್ಪ ಅಣ್ಣಿಗೇರಿ, ಬಸವರಾಜ ಕುಂದಗೋಳ, ಸಿದ್ಧಲಿಂಗಪ್ಪ ಮುಳ್ಳಾಳ, ಸುದೀಪ ಕರಿ ಮುಂತಾದವರು ಪಾಲ್ಗೊಂಡಿದ್ದರು.
ಬೆಳಿಗ್ಗೆ ಸೊರಟೂರಿನ ಫಕ್ಕೀರೇಶ್ವರ ಸ್ವಾಮಿಗಳು ಸುಮಾರು 150 ಕ್ಕೂ ಹೆಚ್ಚು ಮಕ್ಕಳಿಗೆ ಲಿಂಗದೀಕ್ಷೆ ನೀಡಿ ಧರ್ಮಬೋಧನೆ ಮಾಡಿದರು, ರಾತ್ರಿ ಶ್ರೀದೇವಿ ಮಹಾತ್ಮೆ ಅರ್ಥಾತ್ ಮಹಿಷಾಸುರ ಮರ್ಧಿನಿ ದೊಡ್ಡಾಟ ಜರುಗಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಗುಡಿಮನಿ, ಗೌರಿ ಗುಡಿ ಓಣಿಯವರು ಭಕ್ತಿ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ಕೆ ಹೆಸರಾದವರು. ತಂದೆ-ತಾಯಿ ಋಣ, ಸಮಾಜದ ಋಣ ತೀರಿಸುವ ಕಾರ್ಯಕ್ಕೆ ನಾವಿಂದು ಮುಂದಾಗಬೇಕಿದೆ ಎಂದರು.