ವಿಜಯಸಾಕ್ಷಿ ಸುದ್ದಿ, ಗದಗ: ಸ್ಥಳೀಯ ಬಸವೇಶ್ವರ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿಯಾಗಿ, ಜೊತೆಗೆ ಕೃಷಿಯಲ್ಲೂ ಯಶಸ್ಸು ಕಂಡ ಕವಯಿತ್ರಿ ಶಿಲ್ಪಾ ಮ್ಯಾಗೇರಿಯವರು ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ 87ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಗದಗ ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.
ಡಿ.21ರಂದು ಸಮನಾಂತರ ವೇದಿಕೆಯಲ್ಲಿ ಡಾ. ಪ್ರದೀಪಕುಮಾರ ಹೆಬ್ರಿಯವರ ಅಧ್ಯಕ್ಷತೆಯಲ್ಲಿ ಜರುಗಲಿರುವ ಕವಿಗೋಷ್ಠಿಯಲ್ಲಿ ಶಿಲ್ಪಾ ತಮ್ಮ ಕವಿತೆ ವಾಚನ ಮಾಡಲಿದ್ದಾರೆ. ಪ್ರೊ. ಶಿಲ್ಪಾ ಅವರ ಭಾರತಾಂಬೆ, ಆಕಾಶಕ್ಕೊಂದು ಏಣಿ, ಮಾತು ಮೌನದ ನಡುವೆ ಮತ್ತು ಚೈತ್ರದ ಚರಮ ಗೀತೆ ಮುಂತಾದ ಕಾವ್ಯ ಕುಸುಮಗಳು ಕನ್ನಡ ಸಾರಸ್ವತ ಲೋಕದ ಓದುಗರ ಗಮನ ಸೆಳೆದಿವೆ.
ಕವಯತ್ರಿ ಶಿಲ್ಪಾ ಅವರೊಂದಿಗೆ ಗದಗ ಜಿಲ್ಲೆಯಿಂದ ಹಿರಿಯ ಸಾಹಿತಿ, ಹಾಸ್ಯ ಕಲಾವಿದ, ಪತ್ರಕರ್ತ ಅರುಣ್ ಕುಲಕರ್ಣಿ ಅವರೂ ಕೂಡ ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ನಿರಂತರ ಪ್ರಕಾಶನ ಮತ್ತು ಮಕಾನದಾರ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಸಾಹಿತಿ ಎ.ಎಸ್. ಮಕಾನದಾರ ಶುಭ ಕೋರಿದ್ದಾರೆ.



