ಬಿಗ್ ಬಾಸ್ ಸೀಸನ್ 11 ಅಂತಿಮ ಘಟ್ಟಕ್ಕೆ ತಲುಪಿದ್ದು, ಇನ್ನೂ ಒಂದು ವಾರದಲ್ಲಿ ಬಿಗ್ ಬಾಸ್ ವಿನ್ನರ್ ಯಾರು ಎಂಬುವುದು ತಿಳಿದು ಬರಲಿದೆ. ಇನ್ನೂ ಮತ್ತೊಂದೆಡೆ ಬಿಗ್ ಬಾಸ್ ಸೀಸನ್ ಗೆ ಕಿಚ್ಚ ಸುದೀಪ್ ವಿದಾಯ ಹೇಳಿದ್ದು, ಕೊನೆಯ ನಿರೂಪಣೆ ಬಗ್ಗೆ ಕಿಚ್ಚ ಭಾವುಕ ಪೋಸ್ಟ್ ಮಾಡಿದ್ದಾರೆ.
ಕನ್ನಡದಲ್ಲಿ ಬಿಗ್ಬಾಸ್ ಶೋ ಅನ್ನು ಆರಂಭದಿಂದಲೂ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಒಂದಲ್ಲ, ಎರಡಲ್ಲ ಬರೋಬ್ಬರಿ 11 ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಬಿಗ್ ಬಾಸ್ ಶೋ ವೇಳೆ ತಮ್ಮ ಮಾತಿನ ಚಮತ್ಕಾರದಿಂದಲೇ ಇಡೀ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದರು. ಸ್ಪರ್ಧಿಗಳಿಗೆ ಯಾವುದನ್ನು ಹೇಗೆ ಹೇಳಬೇಕು ಹಾಗೇ ಹೇಳಿ, ಕೊನೆಗೆ ಉತ್ತರ ಕೊಡುತ್ತಿದ್ದರು.
ಸದ್ಯ ಈಗ ನಡೆಯುತ್ತಿರುವ ಬಿಗ್ಬಾಸ್ ಸೀಸನ್ 11ರ ಶೋನಲ್ಲೂ ಸುದೀಪ್ ಅಚ್ಚುಕಟ್ಟಾಗಿ ಎಲ್ಲವನ್ನು ನಿಭಾಯಿಸಿ ಯಶಸ್ವಿ ಕಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಇದೇ ನನ್ನ ಕೊನೆ ಬಿಗ್ಬಾಸ್ ಶೋ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಿಂದ ಈ 11ರ ಸೀಸನ್ವರೆಗೆ ಬಿಗ್ಬಾಸ್ ಅನ್ನು ಎಂಜಾಯ್ ಮಾಡಿದ್ದೇನೆ. ಶೋನಲ್ಲಿ ಪ್ರೀತಿ, ಅಭಿಮಾನ ತೋರಿಸಿದ್ದಕ್ಕೆ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಮುಂದಿನ ಶನಿವಾರ, ಭಾನುವಾರ ನಡೆಯುವ ಗ್ರ್ಯಾಂಡ್ ಫಿನಾಲೆ ನಾನು ನಡೆಸಿಕೊಡುವ ಕೊನೆಯ ಶೋ ಆಗಿರಲಿದೆ. ಎಲ್ಲರನ್ನು ಚೆನ್ನಾಗಿ ರಂಜಿಸಿದ್ದೇನೆ ಎಂದು ಭಾವಿಸುತ್ತೇನೆ. ಇದೊಂದು ಮರೆಯಲಾಗದ ಜರ್ನಿಯಾಗಿದೆ. ನನಗೆ ಸಾಧ್ಯವಾದಷ್ಟು ಎಲ್ಲವನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದೇನೆಂದು ತಿಳಿಯುತ್ತೇನೆ. ಇಂತಹ ಒಳ್ಳೆಯ ಅವಕಾಶ ಕೊಟ್ಟಿದ್ದಕ್ಕೆ ಕಲರ್ಸ್ ಕನ್ನಡದವರಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ, ಗೌರವವಿದೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.