ವಿಜಯಸಾಕ್ಷಿ ಸುದ್ದಿ, ರೋಣ: ರಾಜ್ಯ ಸರಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಯು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ತಹಸೀಲ್ದಾರ್ ನಾಗರಾಜ ಕೆ ಹೇಳಿದರು.
ಅವರು ತಾಲೂಕಾ ಕ್ರೀಡಾಂಗಣದಲ್ಲಿ ಜರುಗಿದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಸಂವಿಧಾನದ ಇಚ್ಛೆಯಂತೆ ತುಳಿತಕ್ಕೊಳಗಾದ ಜನರು ಆರ್ಥಿಕ ಹಾಗೂ ಸಾಮಾಜಿಕವಾಗಿ ಬಲಿಷ್ಠವಾಗಬೇಕು ಎಂಬ ದೃಷ್ಟಿಯಿಂದ ಸರಕಾರ ಐದು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿರುವುದು ಸ್ವಾಗತರ್ಹವಾಗಿದೆ ಎಂದರು.
ಭಾರತ ಸಹೋದರತೆ, ಏಕತೆ ಹಾಗೂ ಸೌಹಾರ್ದತೆಯ ರಾಷ್ಟçವಾಗಿದೆ. ಕೇಂದ್ರ ಸರಕಾರ ಕೂಡ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತಂದು, ದೇಶದ ಬಲವರ್ಧನೆಗೆ ಶ್ರಮಿಸುತ್ತಿದೆ. ಜಾತಿ-ಧರ್ಮಗಳ ಸಂಕೋಲೆಗಳನ್ನು ದಾಟಿ ನಾವು ಬದುಕಬೇಕಿದೆ. ಅಂದಾಗ ಮಾತ್ರ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದರು.
10ನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕ ಜಿ.ಎಸ್. ಪಾಟೀಲ ಲ್ಯಾಪ್‌ಟ್ಯಾಪ್ ವಿತರಿಸಿದರು. ವಿವಿಧ ಇಲಾಖೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ ನೌಕರರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇತ್ತೀಚೆಗೆ ಪ್ರವಾಸದ ಸಂದರ್ಭದಲ್ಲಿ ಸಮುದ್ರದ ಅಲೆಗೆ ಸಿಕ್ಕು ಮರಣ ಹೊಂದಿದ್ದ ಮೇವುಂಡಿ ಗ್ರಾಮದ ಪೀರಸಾಬ ನದಾಫ್ ಎಂಬುವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 2 ಲಕ್ಷ ರೂಗಳ ಚೆಕ್‌ನ್ನು ಶಾಸಕ ಜಿ.ಎಸ್. ಪಾಟೀಲ ಮೃತನ ತಾಯಿಗೆ ಹಸ್ತಾಂತರಿಸಿದರು.
ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಸಂಗನಗೌಡ ಪಾಟೀಲ, ವಿ.ಬಿ. ಸೋಮನಕಟ್ಟಿಮಠ, ಸಂಗಪ್ಪ ಜಿಡ್ಡಿಬಾಗಿಲ, ಪ್ರಕಾಶ ಹೊಸಳ್ಳಿ, ಇಒ ಚಂದ್ರಶೇಖರ್ ಕಂದಕೂರ, ಬಿಇಒ ರುದ್ರಪ್ಪ ಹುರಳಿ, ಸಿಪಿಐ ಎಸ್.ಎಸ್. ಬಿಳಗಿ, ಜೆ.ಟಿ. ಕೊಪ್ಪದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಕರು ಉಪಸ್ಥಿತರಿದ್ದರು.