ಗದಗ:- ಕರ್ನಾಟಕದಲ್ಲಿ ಮೈಕ್ರೋಫೈನಾನ್ಸ್ ಕಿರುಕುಳದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚು ಬೆಳಕಿಗೆ ಬರುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿರುವ ಹಿನ್ನೆಲೆ, ರೈತರು ಮಹಿಳೆಯರು ಯುವಕರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.
ಹೀಗಾಗಿ ಎಚ್ಚೆತ್ತಿರುವ ರಾಜ್ಯ ಸರ್ಕಾರವು, ಮೈಕ್ರೋ ಫೈನಾನ್ಸ್ ಗಳಿಗೆ ಮೂಗುದಾರ ಹಾಕೋದಕ್ಕೆ ಹೊಸ ಕಾನೂನು ತರಬೇಕೆಂದು ಚಿಂತನೆ ನಡೆಸಿದೆ. ಆದರೆ ಇದಕ್ಕೂ ಕ್ಯಾರೇ ಎನ್ನದ ಫೈನಾನ್ಸ್ ನವರು ಜನರಿಗೆ ಕೊಡುತ್ತಿರುವ ಕಿರುಕುಳ ಮಾತ್ರ ನಿಲ್ಲಿಸುತ್ತಿಲ್ಲ. ಯಾರು ನಮಗೇನು ಮಾಡುವರು ಎಂಬಂತೆ ಜನರ ಬಳಿ ದಬ್ಬಾಳಿಕೆ ತೋರುತ್ತಿದ್ದಾರೆ.
ಅದರಂತೆ ಗದಗ ಬೆಟಗೇರಿಯ ಜರ್ಮನ್ ಆಸ್ಪತ್ರೆ ಸಿಬ್ಬಂದಿಯೊಬ್ಬರಿಗೆ ಇಬ್ಬರು ಫೈನಾನ್ಸ್ ಸಿಬ್ಬಂದಿ ಆಸ್ಪತ್ರೆ ಬಳಿಯೇ ಬಂದು ಹಣ ಕೇಳ್ತಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಇದು 10 ದಿನದ ಹಿಂದಿನ ವೀಡಿಯೋ ಎನ್ನಲಾಗಿದ್ದು, ವೀಡಿಯೋದಲ್ಲಿ ಸರ್ವಗ್ರಾಮ ಹೆಸರಿನ ಮೈಕ್ರೋ ಫೈನಾನ್ಸ್ ಸಿಬ್ಬಂದಿಯು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡುತ್ತಿರೋದು ಸೆರೆಯಾಗಿದೆ.
ಇನ್ನೂ ಹಣ ಕೇಳ್ತಿರೋದನ್ನ ಸ್ಥಳೀಯರು ಪ್ರಶ್ನೆ ಮಾಡಿದ್ರೆ ಮೈಕ್ರೋ ಸಿಬ್ಬಂದಿ ದಿಮಾಕಿನಲ್ಲಿ ಉದ್ಧಟತನದ ಉತ್ತರ ಕೊಡ್ತಿರೋದು ವೀಡಿಯೋದಲ್ಲಿ ಕಂಡು ಬಂದಿದೆ. ಕರ್ತವ್ಯ ನಿರ್ವಹಿಸುತ್ತಿರೋ ಸಿಬ್ಬಂದಿಗೆ ಹಣ ಕೊಡಲೇಬೇಕೆಂದು ಸ್ಥಳದಲ್ಲೇ ಪಟ್ಟು ಹಿಡಿದು ಕುಳಿತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ನೂ ವಿಡಿಯೋ ನೋಡಿದ ನೆಟ್ಟಿಗರು, ಫೈನಾನ್ಸ್ ಸಿಬ್ಬಂದಿಗೆ ತಕ್ಕ ಪಾಠ ಕಲಿಸಬೇಕು ಎಂಬ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಿದ್ದಾರೆ.