ಮಂಡ್ಯ: ದಕ್ಷಿಣ ಬದರಿ ಎಂದೇ ಪ್ರಸಿದ್ಧಿ ಪಡೆದಿರುವ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆಯಲ್ಲಿ ರಾಜಮುಡಿ ಬ್ರಹ್ಮೋತ್ಸವ ಸಂಭ್ರಮ ಮನೆಮಾಡಿತ್ತು.
ಕಾರ್ತಿಕ ಮಾಸದ ಪ್ರಮುಖ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಶ್ರೀ ಚೆಲುವನಾರಾಯಣಸ್ವಾಮಿಯ ರಾಜಮುಡಿ ಉತ್ಸವ ಕಳೆದ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಮೈಸೂರು ಒಡೆಯರ್ ಸಂಸ್ಥಾನದ ಅರಸರು ಭಕ್ತಿಪೂರ್ವಕವಾಗಿ ಸಮರ್ಪಿಸಿದ್ದ ಐತಿಹಾಸಿಕ ರಾಜಮುಡಿ ಕಿರೀಟವನ್ನು ಸ್ವಾಮಿಗೆ ಅಲಂಕರಿಸಲಾಗಿತ್ತು. ವಜ್ರಖಚಿತ ಕಿರೀಟ, ಸಿಂಹಲಾಂಛನ, ಗಂಡಭೇರುಂಡ, ಪದ್ಮಪೀಠ ಹಾಗೂ ಶಂಖ-ಚಕ್ರಗಳ ದಿವ್ಯಾಭರಣಗಳಿಂದ ಅಲಂಕೃತಗೊಂಡಿದ್ದ ಉತ್ಸವಮೂರ್ತಿಯ ದರ್ಶನ ಭಕ್ತರ ಕಣ್ಮನ ಸೆಳೆಯಿತು.
ರಾಜಮುಡಿ ಧರಿಸಿ ರಾಜಬೀದಿಯಲ್ಲಿ ಸಾಗಿದ ಚೆಲುವನಾರಾಯಣಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಸೇರಿದ್ದರು. ಸ್ವಾಮಿಯ ಮೆರವಣಿಗೆ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಮೊಳಗಿಸಿ ಭಕ್ತಿಪರವಶರಾದರು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಇನ್ನು ರಾಜಮುಡಿ ಉತ್ಸವದ ಸಂಭ್ರಮದ ಬೆನ್ನಲ್ಲೇ ನವೆಂಬರ್ 19ರಂದು ಮೇಲುಕೋಟೆಯಲ್ಲಿ ಪ್ರಸಿದ್ಧ ತೊಟ್ಟಿಲಮಡು ಜಾತ್ರಾ ಮಹೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಮತ್ತೊಂದು ಧಾರ್ಮಿಕ ಸಂಭ್ರಮಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.









