ಡಾ,ಅಂಬೇಡ್ಕರ್ ಅವರ ಪರಿಶ್ರಮ, ಆದರ್ಶಗಳು ದಾರಿದೀಪ

Vijayasakshi (Gadag News) :

ವಿಜಯಸಾಕ್ಷಿ ವಿಶೇಷ

ಭೀಮರಾವ್ ರಾಮ್‌ಜೀ ಅಂಬೇಡ್ಕರ್ ರವರು ಏಪ್ರಿಲ್ 14, 1891 ರಂದು ರಾಮಜಿ ಮತ್ತು ಭೀಮಬಾಯಿ ದಂಪತಿಗಳ 14ನೇ ಮಗನಾಗಿ ಜನಿಸಿದರು.ಅಂಬೇಡ್ಕರವರ ಮೊದಲ ಹೆಸರು ಭೀಮರಾವ್ ಆಗಿತ್ತು, ಪ್ರಾಥಮಿಕ ಶಿಕ್ಷಣವು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ,ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿನಲ್ಲಿ ಅನೇಕ ಕಹಿ ಘಟನೆಗಳ ಮಧ್ಯಯೇ 1907ರಲ್ಲಿ 10ನೇ ತರಗತಿ ಪಾಸಾಗುತ್ತಾರೆ. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ ರವರು 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ.

ನಂತರ 1913ರಲ್ಲಿ ಅಮೆರಿಕಾದ
ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ ಎ ಹಾಗೂ ಎಂ ಎ ,ಪಿಎಚ್ ಡಿ ಪದವಿ ಪಡೆದ ನಂತರ ಹೆಚ್ಚಿನ ಉನ್ನತ ವ್ಯಾಸಂಗವನ್ನು ಇಂಗ್ಲೆಂಡಿನಲ್ಲಿ ಮುಗಿಸಿದ ತದನಂತರ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಸಹ ಪಡೆಯುವ ಮೂಲಕ ಭಾರತಕ್ಕೆ ಬಂದು ವಕೀಲ ವೃತ್ತಿಯನ್ನು ಪ್ರಾರಂಭಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.ಇದೆ ಸಮಯದಲ್ಲಿ ಇವರನ್ನು1927ರಲ್ಲಿ ಮುಂಬಯಿಯ ಶಾಸಕಾಂಗ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ.ಈ ತನ್ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು ಜೊತೆಗೆ 1927 ರಿಂದ 1932 ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಟ ಮಾಡುವ ಮೂಲಕ ಸಮತಾವಾದದ ಸಮಾಜ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿರುತ್ತಾರೆ.

ದೇಶದ ಮೊದಲ ಕಾನೂನು ಮಂತ್ರಿಯಾಗಿ ಅನೇಕ ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದಾರೆ, ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಹಾಗೂ ಕಾನೂನು ರಂಗದಲ್ಲೂ ಅತ್ಯುತ್ತಮ ಕೆಲಸ ಮಾಡಿ ದೇಶದ ಜನಸಾಮಾನ್ಯರ ಪ್ರೀತಿ ಸ್ನೇಹ ಸಂಪಾದನೆ ಮಾಡಿರುತ್ತಾರೆ.ಹೀಗಾಗಿ
ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ, ಈ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿದ ಕೀರ್ತಿ ಇವರಿಗೆ ಸಲ್ಲಬೇಕು. ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವ ಭಾವನೆಗಳು ಸೇರಿ ಹತ್ತು ಹಲವಾರು ಸಮಾಜಿಕ ಮೌಲ್ಯಾಧಾರಿತ ವೈಜ್ಞಾನಿಕ ಅಭಿವೃದ್ಧಿ ಪರ ಚಿಂತನಗಳ ಸಿದ್ದಾಂತ್ ಗಳು ದೇಶಕ್ಕೆ ನೀಡಿದ್ದಾರೆ. ಇವರ ತ್ಯಾಗ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಕಚ್ಚೆದೇಯ ಮನೋಧರ್ಮಗಳ ನೈಜತೆ ವಿಚಾರಗಳು ಇಂದಿನ ಸಮಾಜಕ್ಕೆ ಪ್ರೇರಣೆ, ಮಾರ್ಗದರ್ಶನ ಎನ್ನುವಂದತ್ತು ಸುಳ್ಳಲ್ಲ.

ಅಂಬೇಡ್ಕರ್ ರವರ ವೈಚಾರಿಕ ಬದುಕು –
ಡಾ.ಬಿ.ಆರ್. ಅಂಬೇಡ್ಕರ ಅವರೊಬ್ಬ ಸಮಾಜಮುಖಿ ಚಿಂತಕ, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ,ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ,
ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ,ಅವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡಿ ವಿಶ್ವಕ್ಕೆ ಮಾದರಿ, ಪ್ರೇರಣೆ ಹಾಗೂ ಪ್ರಜಾಪ್ರಭುತ್ವವನ್ನು ಅರ್ಥೈಸುವ ಸಾಮರ್ಥ್ಯವನ್ನು ಹೊಂದಿದ್ದು ಹೀಗಾಗಿ ಭಾರತ ಸಂವಿಧಾನ ವಿಶ್ವ ಸರ್ವ ಶ್ರೇಷ್ಠ ಮಾಹಾಸಂವಿಧಾನ ಬಂಧುಗಳೇ, ಆದ್ದರಿಂದ ದೇಶದಲ್ಲಿ ಇಂದು ರಾಷ್ಟ್ರಪತಿಯಿಂದ ಹಿಡಿದು ಗ್ರಾಪಂ ಸದಸ್ಯರವರೆಗೆ ಆಡಳಿತ ನಡೆಯುತ್ತಿದೆ ಎಂದರೆ ಅದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ರಚಿಸಿದ ಸಂವಿಧಾನದಿಂದ ಎಂಬುದನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಂಡು ಗೌರವದಿಂದ ನಡೆಯಬೇಕಾಗಿದೆ. ಜೊತೆಗೆ ಅವರ ಕೈಗೊಂಡ ಹಲವಾರು ಜನಪರ ಕಾಳಜಿ ನಮ್ಮಗೆಲ್ಲರಿಗೂ ಮಾದರಿ, ಅವರ ವೈಚಾರಿಕ ಕ್ರಾಂತಿ ಹಾಗೂ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳ ವಿರುದ್ಧದ ಹೋರಾಟ ಎಂದೆಂದಿಗೂ ಈ ದೇಶವು ಮರೆಯುವಂತಿಲ್ಲ.

ಈ ಎಲ್ಲಾ ಚಳವಳಿಗಳಿಗೆ ಇಂದಿಗೂ – ಎಂದೆಂದಿಗೂ ಕೆಚ್ಚೆದೆಯ ಹೋರಾಟದ ಸ್ಪೂರ್ತಿ ಚಿಂತನೆಗಳೇ ಅವರು ಕೊಟ್ಟ ದೊಡ್ಡ ಬಳುವಳಿ ನಮಗೆ ಎಂದರೆ ತಪ್ಪಾಗಲಾರದು. ಕೆಲವರು ಬದುಕಿದ್ದರೂ ಸತ್ತಂತೆ ಇರುತ್ತಾರೆ. ಮತ್ತೆ ಕೆಲವರು ಸತ್ತ ನಂತರವೂ ಬದುಕಿರುತ್ತಾರೆ. ಮೊದಲನೆಯದಕ್ಕೆ ಉದಾಹರಣೆ ನೀಡಲು ಈ ಜಗದಲ್ಲಿ ಕೋಟ್ಯಂತರ ಮಂದಿ ಇರಬಹುದು. ಆದರೆ, ಎರಡನೆಯದಕ್ಕೆ ನಿದರ್ಶನ ಕೊಡಲು ಕೋಟಿಗೊಬ್ಬರು ದೊರೆಯುವುದೂ ದುರ್ಲಭ. ಈ ಹಿಂದೆ ಹುಟ್ಟಿರದ, ಬಹುಶಃ ಮುಂದೆಯೂ ಹುಟ್ಟಲು ಸಾಧ್ಯವಿಲ್ಲದ ವಿರಳಾತಿ ವಿರಳ ವ್ಯಕ್ತಿತ್ವದ ಅಪರೂಪದ ವ್ಯಕ್ತಿ ಮತ್ತು ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಬಗ್ಗೆ ಅಗಾದ ಪಾಂಡಿತ್ಯ ಹಾಗೂ ಗೌರವ ಹೊಂದಿದ್ದ ಡಾ.ಬಿ.ಆರ್. ಅಂಬೇಡ್ಕರ ರವರು, ಅವರ ಕಠಿಣ ಪರಿಶ್ರಮ, ಸಾಧನೆ, ತತ್ತ್ವಾದರ್ಶ ಇಂದಿನ ಜನಸಾಮಾನ್ಯರಿಗೆ ಪ್ರೇರಣೆ ಎಂಬುದು ನಾವೆಲ್ಲರೂ ಆತ್ಮಸಾಕ್ಷಿಯಿಂದ ಒಪ್ಪಲೇ ಬೇಕು. ನಮ್ಮ ನಡುವೆ ಇದ್ದ ಓರ್ವ ವ್ಯಕ್ತಿ ಸರ್ವಮಾನ್ಯ ಮಹಾನ್‌ ಶಕ್ತಿಯಾಗಿ ಬೆಳೆದು, ಒಂದು ಸಂಸ್ಥೆಯಾಗಿ ರೂಪುಗೊಂಡು ಕೋಟ್ಯಂತರ ಜನರ ಹೃದಯ ಕಮಲಗಳಲ್ಲಿ ಬಲಿಷ್ಠವಾಗಿ ಬೇರೂರಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಪ್ರತಿಮಾತ್ಮಕ ಘನ ವ್ಯಕ್ತಿತ್ವದ ಅಂಬೇಡ್ಕರ್‌ ರವರೇ ಸಾಕ್ಷಿ.

ಬಡತನವನ್ನು ಸಹಿಸಬಹುದು. ಆದರೆ, ಸ್ವಾಭಿಮಾನವನ್ನೇ ಕೆಣಕುವ ಅಸ್ಪೃಶ್ಯತಾ ಪದ್ಧತಿಯನ್ನು ಸಹಿಸಲಾಗದು. ಜಾತಿ ವ್ಯವಸ್ಥೆಯ ಈ ಅನಿಷ್ಠವನ್ನು ದೂರಮಾಡಲು ಡಾ. ಅಂಬೇಡ್ಕರ್‌ ಅವರು ನಡೆಸಿದ ಹೋರಾಟಗಳು ವರ್ಣಿಸಲು ಅಸಾಧ್ಯವಾದುದು. ಕೆಳ ಜಾತಿಯ ಮಕ್ಕಳು ಶಾಲೆಯಲ್ಲಿ ಎಲ್ಲರೊಡನೆ ಸರಿಸಮನಾಗಿ ಕೂರುವಂತಿರಲಿಲ್ಲ. ಅಷ್ಟೇ ಏಕೆ ? ಎತ್ತಿನ ಗಾಡಿಯನ್ನು ಏರುವಂತಿರಲಿಲ್ಲ. ಎತ್ತಿನಗಾಡಿಯನ್ನು ಏರಿದರೆ ಎತ್ತುಗಳಿಗೇ ಮೈಲಿಗೆಯಾಗುತ್ತದೆ ಎಂಬ ಅರ್ಥಹೀನ ಹಾಗೂ ಅಮಾನವೀಯ ಸಂಸ್ಕೃತಿ. ಇಂಥ ಅಪಮಾನ ಎದುರಿಸುವ ಎದೆಗಾರಿಕೆ ಅಂಬೇಡ್ಕರ್‌ ಅವರಲ್ಲಿ ಚಿಗುರಿದ್ದು ನಮ್ಮ ಭಾರತ ದೇಶದ ಭಾಗ್ಯ.

ಹಾಗಾಗಿ ಅವರು ತೋರಿದ ಸಾಮಾಜಿಕ ಮಾರ್ಗದರ್ಶನಗಳು ಆಧುನಿಕ ಭಾರತದ ನಿರ್ಮಾಣದಲ್ಲಿ ಸಹಕಾರಿಯಾಗುತ್ತವೆ ಮತ್ತೆ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ರವರ ಈ ಹೆಸರೇ ಕೋಟ್ಯಂತರ ಜನರಿಗೆ ಸ್ಪೂರ್ತಿ, ದಮನಿತರ ದನಿಯಾಗಿ, ಶೋಷಿತರಿಗೆ ಕಿವಿಯಾಗಿ, ಅವರೆಲ್ಲರಿಗೂ ಸ್ವಾಭಿಮಾನ ಬದುಕಿನ ದಾರಿ ತೋರಿಸಿದ ಧೀಮಂತ ನಾಯಕರಾಗಿ ಕಂಗೊಳಿಸಿದ ಮಾಹಾ ಚೈತನ್ಯ ಮೂರ್ತಿ ಸ್ನೇಹಿತರೇ.

ಇಂಥ ವಾತಾವರಣದಲ್ಲಿ ಜನಿಸಿದ ಯುವ ತರುಣ ತನ್ನ ಪ್ರತಿಭೆಯಿಂದಲೇ ವಿದೇಶದಲ್ಲಿ ವ್ಯಾಸಂಗ ಮಾಡಿ. ಆ ಸಂದರ್ಭದಲ್ಲಿ ಅಲ್ಲಿಯೇ ದುಡಿಮೆಗೆ ವಿಫುಲ ಅವಕಾಶಗಳು ದೊರೆತರೂ, ಅವೆಲ್ಲವನ್ನೂ ನಿರಾಕರಿಸಿ, ಸ್ವದೇಶಕ್ಕೆ ಮರಳಿ ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜತೆಗೆ ಸಮಾಜದ ಅವಕೃಪೆಗೆ ತುತ್ತಾಗಿದ್ದ ಕೋಟ್ಯಂತರ ಜನರಿಗೆ ಬದುಕು ಕಟ್ಟಿಕೊಡಲು ಸುಧಾರಣೆ – ಅಭಿವೃದ್ಧಿಯೆಂಬ ಸಮಾಜಿಕ ಕಳಕಳಿಯ ಚಕ್ರವನ್ನು ಪ್ರಯೋಗಿಸಿದರು. ಅನ್ನಕ್ಕೆ ಜಾತಿ ಇಲ್ಲ. ಅಂತೆಯೇ, ಪ್ರತಿಭೆಗೂ ಜಾತಿ ಇಲ್ಲ ಎಂಬುವುದನ್ನು ಜಗತ್ತಿಗೆ ಸಾರಿ ಹೇಳಿದರು. ಸಾಮಾಜಿಕ ತಾರತಮ್ಯ ನಿವಾರಣೆಗೆ ಶಿಕ್ಷಣವೇ ಉತ್ತರ ಎಂಬುದು ಡಾ. ಅಂಬೇಡ್ಕರ್‌ ವೇದವಾಕ್ಯವಾಗಿತ್ತು ಹೀಗಾಗಿ ಇಂತಹ ಅನೇಕ ಕ್ರಾಂತಿಕಾರಿ ತಮ್ಮ ಬದುಕಿನ ಹೋರಾಟದ ಮೂಲಕ ಬಡವರ – ನೊಂದವರ ಕಣ್ಣಿರಿನ ಹನಿಯನ್ನು ಒರೆಸಿದ ಕೀರ್ತಿ ಮೇಧಾವಿ ಪುರುಷ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ.

ಅಂಬೇಡ್ಕರ್ ರವರು ಚಿಂತನೆಗಳು:
ಮನುಸ್ಮೃತಿ ಬದಿಗಿಟ್ಟು ಅಂಬೇಡ್ಕರ್ ಸ್ಮೃತಿ ಆಧಾರದ ಮೇಲೆ ಆಡಳಿತ ಮತ್ತು ಜೀವನ ನಡೆಸುವ ಸಂಕಲ್ಪ ತೊಟ್ಟಾಗ ಮಾತ್ರ ದೇಶದಲ್ಲಿ ಒಗ್ಗಟ್ಟು ಮೂಡಲು ಸಾಧ್ಯ.ಅಂಬೇಡ್ಕರ್ ಸ್ಮೃತಿ ಎಂದರೆ ಭಾರತದ ಸಂವಿಧಾನ. ಇದು ಮಾನವೀಯ ಮೌಲ್ಯದಿಂದ ಕೂಡಿದೆ. ಸಮಾನತೆ, ಪ್ರಜಾತಂತ್ರ, ಒಕ್ಕೂಟ ವ್ಯವಸ್ಥೆಯಿದೆ. ಇದರ ಆಧಾರದ ಮೇಲೆ ನಮ್ಮ ಆಡಳಿತ ಮತ್ತು ಜೀವನ ಮಾರ್ಗ ಕಂಡುಕೊಳ್ಳುವುದರಿಂದ ಶೋಷಣೆ, ದಾರಿದ್ರ್ಯ, ಅಸಮಾನತೆ ಇತ್ಯಾದಿ ನಿವಾರಿಸಬಹುದು. ನಮ್ಮ ದೇಶವನ್ನು ಒಗ್ಗಟ್ಟಾಗಿ ಮುಂದುವರಿಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ, ಅಂಬೇಡ್ಕರ್ ಅವರ ಚಿಂತನೆಗಳು, ವಿಚಾರಧಾರೆಗಳನ್ನು ಯುವ ಜನರಿಗೆ ಮುಟ್ಟಿಸುವ ದಿಸೆಯಲ್ಲಿ ಅವರು ಜೀವನ ಪ್ರಯೋಗ ಹೆಚ್ಚು ಪ್ರಭಾವಶಾಲಿ ಹಾಗೆ ಅಂಬೇಡ್ಕರ್ ರವರು
ಜೀವಂತವಾಗಿಲ್ಲದಿದ್ದರೂ ಅವರ ವೈಚಾರಿಕ ಚಿಂತನೆಗಳು ಇನ್ನೂ ಜೀವಂತವಾಗಿ ಇವೇ ಅನ್ನುವದನ್ನು ಮರೆಯಬಾರದು. ಹಾಗಾಗಿ ಅವರ ವಿಚಾರಗಳನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಳ್ಳುವ ದಿಸೆಯಲ್ಲಿ ಹೆಜ್ಜೆ ಹಾಕುವುದು ಒಳ್ಳೆಯದು ಹಾಗೆ ನಾಡಿಗೆ – ದೇಶಕ್ಕೆ ಮಾದರಿಯಾಗುವ ಮೂಲಕ ಪ್ರೇರಣೆ ಕೆಲಸ ಮಾಡಿ, ಅಂಬೇಡ್ಕರ್ ರವರ ಗೌರವವನ್ನು ಜಾಗತಿಕ ಮಟ್ಟದಲ್ಲಿ ಮಿಂಚುವಂತೆ ಕಾರ್ಯ ನಿರ್ವಹಣೆ ಮಾಡುವ ಮೂಲಕ ಅವರ ಆಶಯದಂತೆ ಬದುಕುವುದು ಕಲಿಯೊಣ.

ಕೊನೆಯದಾಗಿ : ಅಂಬೇಡ್ಕರ್‌ ಒಬ್ಬ ರಾಜಕೀಯ ಮುತ್ಸದ್ದಿ, ಸಾಂವಿಧಾನಿಕ ವಿದ್ವಾಂಸ ಮತ್ತು ಬರಹಗಾರರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಶತಮಾನಗಳಿಂದಲೂ ತಾರತಮ್ಯವನ್ನೆದುರಿಸಿದ ದಲಿತ ಸಮುದಾಯದಿಂದ ಬಂದಿದ್ದರೂ ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಕಡ್ಡಾಯವನ್ನು ಖಾತ್ರಿಗೊಳಿಸಿ ಕಾನೂನಿನಲ್ಲಿ ತಮ್ಮ ನಂಬಿಕೆಯಿಟ್ಟು ರಾಜಕೀಯ ಮುತ್ಸದ್ದಿತನವನ್ನು ತೋರಿಸಿದರು ಎನ್ನುವ ವಾಸ್ತವವನ್ನು ನಾವು ಗುರುತಿಸಲೇಬೇಕು, ಆದ್ದರಿಂದಲೇ ಇಂದು ಇಡೀ ವಿಶ್ವದಲ್ಲೇ ಅತ್ಯುತ್ಕೃಷ್ಟ ಲಿಖಿತ ಸಂವಿಧಾನವನ್ನು ನಮ್ಮ ಭಾರತ ಹೊಂದಿದೆ ಎಂದರೆ ಅದಕ್ಕೆ ಪ್ರಧಾನ ಗೌರವ ಶಿಲ್ಪಿ, ಸೃಜನಶೀಲ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ ಎಂದೇ ಹೆಸರಾಗಿದ್ದ ಡಾ ಅಂಬೇಡ್ಕರ್‌ ಅವರು ಪ್ರಮುಖ ಕಾರಣ ಹಾಗೆ ಭಾರತ ಕಂಡ ಒಂದು ಅದ್ಭುತ ಶಕ್ತಿ ಇವರಾಗಿದ್ದರು ಎನ್ನುವುದು ಮತ್ತೊಂದು ವಿಶೇಷ ಮತ್ತೆ ಇಂದೂ ಹಾಗೂ ಮುಂದೆಯೂ ಶೋಷಿತರೆಲ್ಲರಿಗೂ ಸಮಾನತೆ ಹಾಗೂ ಸ್ವಾಭಿಮಾನದ ಹರಿಕಾರ – ಸಂಕೇತವಾಗಿರುತ್ತಾರೆ ಎನ್ನುವುದು ನಾವ್ಯಾರೂ ಮರೆಯಬಾರದು.

ಅವರ ಅಪ್ರತಿಮವಾದ ನಾಗರಿಕ ಹಕ್ಕುಗಳ ಹೋರಾಟ, ಜೊತೆಗೆ ಬಡವರ ಏಳಿಗೆಗಾಗಿ ಶ್ರಮಿಸಿ ಬದುಕಿದ ದಿವ್ಯಚೇತನ. ಅವರಿಗಿದ್ದ ಜ್ಞಾನದ ಹಂಬಲ ಯುವ ಜನತೆಗೆ ಆಶಾಕಿರಣ ತತ್ವ ಮತ್ತು ಸಕಲ ಜೀವಾತ್ಮರಿಗೂ ಲೇಸನೇ ಬಯಸಿದ 12ನೇ ಶತಮಾನದ ಬಸವಾದಿ ಪ್ರಮಥರು ಹೇಳಿದ ಮಾತನ್ನು ಈ ಸಮಾಜದಲ್ಲಿ ಸಾಕಾರಗೊಳಿಸಿ ಸಮಾನತಾ ಸಮಾಜವನ್ನು ನಿರ್ಮಿಸುವಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ರವರ ಕೊಡುಗೆ ಅಪಾರ ಮತ್ತೆ ಅವರ ರಚಿಸಿರುವ ಭಾರತದ ಸಂವಿಧಾನವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅವರ ಸಮ-ಸಮಾಜದ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೊತ್ತ ಭಾರತ ಸಂವಿಧಾನವನ್ನು ಇಂದು ಜಗತ್ತಿನ ಇತರೆ ದೇಶಗಳೂ ಅನುಕರಿಸುತ್ತಿವೆ ಹಾಗೂ ಅನುಸರಿಸುತ್ತಿವೆ.

ಹಾಗಾಗಿ ಈಗ ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಅವರು ಕಂಡ ನಿಜವಾದ ಸಾಮಾಜಿಕ ಪ್ರಜಾಪ್ರಭುತ್ವದ ಕನಸನ್ನು ನಾವೆಲ್ಲರೂ ನನಸಾಗಿಸಬಹುದು. ಹಾಗೆ ಅವರ ಜೀವನ ಚರಿತ್ರೆ ಹಾಗೂ ಅವರು ಸಾಗಿಸಿದ ಬದುಕು ಇಂದಿನ ಯುವಕರಿಗೆ ಪ್ರೇರಣೆಯಾಗಬೇಕು ಆ ದಿಸೆಯಲ್ಲಿ ಯುವ ಜನತೆ ಮಾಹಾತ್ಯಾಗ ಮೂರ್ತಿ ಅಂಬೇಡ್ಕರ್ ರವರ ಹಾದಿಯಲ್ಲಿ ಒಂದಿಷ್ಟು ದೂರ ಕ್ರಮಿಸಿದರೆ ದೇಶಕ್ಕೆ – ವಿಶ್ವಕ್ಕೆ ಉತ್ತಮ ಅಲ್ಲದೆ ನಾವೆಲ್ಲರೂ ಸಮೃದ್ಧವಾಗಿ ಜೀವನ ನಡೆಸಲು ಸಾಧ್ಯ.

ಹರೀಶ್ ಎಮ್ ಟಿ, ವಕೀಲರು, ಬೆಂಗಳೂರು
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

eight − 7 =