HomeGadag Newsಹೀಟ್ ಸ್ಟ್ರೋಕ್‌ ಬಗ್ಗೆ ಮುಂಜಾಗೃತೆಯಿರಲಿ: ಡಾ. ಎಸ್. ಎಸ್.ನೀಲಗುಂದ

ಹೀಟ್ ಸ್ಟ್ರೋಕ್‌ ಬಗ್ಗೆ ಮುಂಜಾಗೃತೆಯಿರಲಿ: ಡಾ. ಎಸ್. ಎಸ್.ನೀಲಗುಂದ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸಕ್ತ ವರ್ಷ ಬೇಸಿಗೆ ಆರಂಭವಾಗಿದ್ದು, ಸೂರ್ಯನ ತಾಪಮಾನ ಎಂದಿಗಿಂತಲೂ ಹೆಚ್ಚು ಇರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ, ಬಿಸಿಗಾಳಿ ಹಾಗೂ ನಿರಂತರವಾಗಿ ನಿಸರ್ಗದಲ್ಲಿ ಬದಲಾಗುವ ವಾತಾವರಣದಿಂದ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಳಿಗಾಲದಲ್ಲಿ ಉಸಿರಾಟದ ತೊಂದರೆ ಜಾಸ್ತಿಯಿರುತ್ತದೆ. ಆದರೆ, ಬೇಸಿಗೆಯಲ್ಲಿ ಹೀಟ್ ವೇವ್, ಹೀಟ್ ಸ್ಟ್ರೋಕ್‌ ಹೆಚ್ಚಾಗಿ ಕಂಡು ಬರುತ್ತದೆ. ನಮ್ಮ ದೇಹದಲ್ಲಿರುವ ಉಷ್ಣಾಂಶಕ್ಕಿಂತ ತಾಪಮಾನ ಏರಿಕೆ ಉಂಟಾದಾಗ ಹೆಚ್ಚು ಬೆವರುವುದು, ಸುಸ್ತು, ಬಾಯಾರುವುದು, ತಲೆ ಸುತ್ತುವುದು ಕಣ್ಣು ಮಂಜಾಗುವುದರ ಜೊತೆಗೆ ನಿರ್ಜಲೀಕರಣದಿಂದ ಮೂರ್ಛೆ ಬಂದು ಬೀಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಪ್ರಖರ ಬಿಸಿಲಿನಿಂದ ಆದಷ್ಟು ದೂರವಿರಬೇಕು ಎಂದು ಹೇಳಿದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿ, ಕುಷ್ಠರೋಗ ಅರಿವು ಆಂದೋಲನದ ವಿವರ ನೀಡಿದರು. ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ನಿಕ್ಷಯ ಪೋಷಣ ಅಭಿಯಾನದಡಿ ಜಿಲ್ಲೆಯಲ್ಲಿ ಕ್ಷಯರೊಗಿಗಳಿಗೆ ಮಾಸಿಕ 1000 ರೂ. ಸಹಾಯಧನ ನೀಡಲಾಗುತ್ತಿದೆ. ದಾನಿಗಳಿಂದ ಪೌಷ್ಟಿಕಾಂಶ ಕಿಟ್ ವಿತರಿಸುವ ಗುರಿಯನ್ನು ಹೊಂದಲಾಗಿದೆ ಎಂದು ವಿವರಿಸಿದರು.

ಜಿಲ್ಲಾ ಸಮೀಕ್ಷಣಾಧಿಕಾರಿ ಡಾ. ವೆಂಕಟೇಶ ರಾಠೋಡ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಆಧುನಿಕ ಜೀವನ ಶೈಲಿ ಪದ್ಧತಿಯಿಂದಾಗಿ ಜನಸಾಮಾನ್ಯರಲ್ಲಿ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತದಂತಹ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕಾಗಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್, ಹೃದಯಾಘಾತದಂತಹ ಸಮಸ್ಯೆಗಳು ಎದುರಾಗುವ ಮುನ್ನ ಕೆಲ ಮುನ್ಸೂಚನೆಗಳನ್ನು ನೀಡುತ್ತವೆ. ಆ ಮುನ್ಸೂಚನೆಗಳನ್ನು ಎಚ್ಚರಿಕೆ ವಹಿಸಿಕೊಂಡು ತಪಾಸಣೆಗೊಳಗಾಗುವ ಮೂಲಕ ಮುಂಜಾಗೃತವಾಗಿ ಚಿಕಿತ್ಸೆ ಪಡೆದುಕೊಂಡು ಮುಂದೆ ಎದುರಾಗುವ ಕಷ್ಟದಿಂದ ಪಾರಾಗಬೇಕು ಎಂದು ಎಚ್ಚರಿಸಿದರು.

ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಮಾಧ್ಯಮವು ಆರೋಗ್ಯ ಇಲಾಖೆಯ ಹಾಗೂ ಜನಸಾಮಾನ್ಯರ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಮಾಧ್ಯಮದವರಿಗೆ ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಹಮ್ಮಿಕೊಂಡಿರುವ ಕಾರ್ಯಾಗಾರವು ಉಪಯುಕ್ತವಾಗಿದೆ ಎಂದು ಹೇಳಿದರು

ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿ ಡಾ. ಅರುಂದತಿ ಹಾಗೂ ಡಾ. ಬಜಂತ್ರಿ ಇಲಾಖೆ ಯೋಜನೆಗಳ ಬಗ್ಗೆ ವಿವರಿಸಿದರು. ಆರೋಗ್ಯ ಇಲಾಖೆಯ ರೂಪಸೇನ್ ಚವ್ಹಾಣ, ಗೀತಾ ಕಾಂಬಳೆ, ಪತ್ರಕರ್ತರು, ಛಾಯಾಗ್ರಾಹಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಜನಸಾಮಾನ್ಯರಿಗೆ ಆರೋಗ್ಯ ಇಲಾಖೆಯ ಹಲವಾರು ಯೋಜನೆಗಳ ಅರಿವು ಕಡಿಮೆಯಿದ್ದು, ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಬಹುಬೇಗನೆ ತಲುಪಿಸುವ ಉದ್ದೇಶದಿಂದಲೇ ಮಾಧ್ಯಮದವರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯ ಅತೀ ಪ್ರಮುಖ ಅಂಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಮಾಧ್ಯಮದವರು ಸಹಕಾರ ನೀಡಬೇಕು.

– ಡಾ. ಎಸ್.ಎಸ್. ನೀಲಗುಂದ.

ಜಿಲ್ಲಾ ಆರೋಗ್ಯ-ಕುಟುಂಬ ಕಲ್ಯಾಣಾಧಿಕಾರಿ.

 

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯದೆಲ್ಲೆಡೆ ಹಕ್ಕಿಜ್ವರ ಉಲ್ಬಣಗೊಂಡಿದ್ದು, ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಹಕ್ಕಿಜ್ವರ ಹೇಗೆ ಹರಡುತ್ತದೆ, ಇದರಿಂದ ಉಂಟಾಗುವ ಪರಿಣಾಮಗಳೇನು, ಜಿಲ್ಲೆಯಲ್ಲಿ ಹಕ್ಕಿಜ್ವರ ಯಾವ ಪ್ರಮಾಣದಲ್ಲಿದೆ ಎಂಬುದರ ಕುರಿತು ಆರೋಗ್ಯ ಇಲಾಖೆಯು ಮಾಧ್ಯಮದ ಮೂಲಕ ಜನಸಾಮಾನ್ಯರಿಗೆ ಎಚ್ಚರಿಕೆ ಜೊತೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದಾಗ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!